ಫೋನ್ ಕಾಲ್​ ಸೆಟ್ಟಿಂಗ್‌ ದಿಢೀರ್​ ಬದಲಾವಣೆ! ಆಗಿದ್ಯಾಕೆ? ಹಳೆಯ ಡಿಸ್‌ಪ್ಲೇಗೆ ಏನು ಮಾಡೋದು? ಇಲ್ಲಿದೆ ಉತ್ತರ | Call Settings

ವಿಜಯವಾಣಿ (2)
Published on

Call Settings: ಬದಲಾವಣೆ ಜಗದ ನಿಯಮ ಎನ್ನುವಂತೆ ಇದೀಗ ಜನರ ಸ್ಮಾರ್ಟ್​ಫೋನ್ ಕಾಲ್​ ಸೆಟ್ಟಿಂಗ್‌ ಕೂಡ ಬದಲಾಗಿದೆ. ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸುವ ಬಹುತೇಕರಿಗೆ ಈ ಬದಲಾವಣೆಗಳು ಆಗಿವೆ. ಕೆಲವರು ಅಪ್ಡೇಟ್​ ಕೊಟ್ಟಾಗ ಹೀಗೆ ಆದರೆ, ಇನ್ನೂ ಕೆಲವರದ್ದು ಸ್ವಯಂಚಾಲಿತವಾಗಿ ಆಗಿದೆ.

ಸೂಚನೆ ಇಲ್ಲದೆ ಹೇಗೆ? ಯಾಕೆ?

ಹಲವರಿಗೆ ಈ ಬದಲಾವಣೆ ಯಾವಾಗ ಆಯಿತು? ಯಾಕಾಯಿತು? ಎಂಬ ಪ್ರಶ್ನೆ ಬೆಂಬಿಡದೆ ಕಾಡುತ್ತಿದೆ. ಸದ್ಯ ಇದೊಂದು ಗೊಂದಲವಾಗಿ ಕಾಡುತ್ತಿರುವುದರಲ್ಲಿ ಅನುಮಾನವೇ ಬೇಡ. ಒಂದೆರೆಡಲ್ಲ, ಅನೇಕ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು ತಮ್ಮ ಕರೆ ಮತ್ತು ಡಯಲರ್ ಸೆಟ್ಟಿಂಗ್‌ಗಳಲ್ಲಿ ತಕ್ಷಣದ ಬದಲಾವಣೆಯನ್ನು ನೋಡಿ ಬೇಸರಕ್ಕೆ ಒಳಗಾಗಿದ್ದಾರೆ. ಇದು ಕಿಂಚಿತ್ತು ಚೆನ್ನಾಗಿಲ್ಲ. ಹಳೆಯ ಮಾದರಿಯೇ ಸರಿಯಿತು ಎಂದು ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ನಿಮ್ಮ ಫೋನ್‌ನಿಂದ ನೀವು ಯಾರಿಗಾದರೂ ಕರೆ ಮಾಡಿದಾಗ ಅಥವಾ ಕರೆ ಸ್ವೀಕರಿಸಿದಾಗ, ಫೋನ್‌ನ ಇಂಟರ್ಫೇಸ್ (ಡಿಸ್ಪ್ಲೇ) ಮತ್ತು ವಿನ್ಯಾಸ ಬದಲಾಗಿದೆ ಎಂದು ತೋರಿಸುತ್ತದೆ. ಯಾವುದೇ ಸೆಟ್ಟಿಂಗ್‌ಗಳನ್ನು ಬದಲಾಯಿಸದೆ ಡಿಸ್ಪ್ಲೇ ಹೇಗೆ ತನ್ನಷ್ಟಕ್ಕೆ ತಾನೇ ಬದಲಾಯಿತು ಎಂದು ಅನೇಕ ಜನರು ಗೊಂದಲಕ್ಕೀಡಾಗಿದ್ದಾರೆ. ಕೆಲವರು ತಮ್ಮ ಫೋನ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಸಹ ಭಯಭೀತರಾಗಿದ್ದಾರೆ.

ಅಷ್ಟಕ್ಕೂ ಈ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿನ ಬದಲಾವಣೆಗಳ ಹಿಂದಿರುವ ಕಾರಣವೇನು? ಸೆಟ್ಟಿಂಗ್‌ಗಳು ಹೇಗೆ ಬದಲಾಗಿವೆ? ಹಳೆಯ ಡಿಸ್ಪ್ಲೇಯನ್ನು ಪಡೆಯುವುದು ಹೇಗೆ? ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ.

ಏನಿದು ಮೆಟೀರಿಯಲ್ 3 ಎಕ್ಸ್‌ಪ್ರೆಸಿವ್ ರೀಡಿಸೈನ್?

ಆ್ಯಂಡ್ರಾಯ್ಡ್ ಬಳಕೆದಾರರ ಫೋನ್‌ಗಳ ಇಂಟರ್ಫೇಸ್‌ನಲ್ಲಿ ತಕ್ಷಣದ ಬದಲಾವಣೆಗೆ ಕಾರಣ ಮೆಟೀರಿಯಲ್ 3 ಎಕ್ಸ್‌ಪ್ರೆಸ್ಸಿವ್ ರೀಡಿಸೈನ್. ಇದು ಆ್ಯಂಡ್ರಾಯ್ಡ್ ಫೋನ್‌ಗಳಿಗಾಗಿ ಗೂಗಲ್ ತಂದಿರುವ ಹೊಸ ಸಾಫ್ಟ್‌ವೇರ್. ಗೂಗಲ್ ಮೇ 2025ರಲ್ಲಿ 'ಮೆಟೀರಿಯಲ್ 3 ಎಕ್ಸ್‌ಪ್ರೆಸ್ಸಿವ್ ರೀಡಿಸೈನ್' ಎಂಬ ಅಪ್ಡೇಟ್​ ತರುತ್ತಿರುವುದಾಗಿ ಘೋಷಿಸಿತು. ಈ ನವೀಕರಣವು ಫೋನ್ ಸಾಫ್ಟ್‌ವೇರ್ ಪ್ರದರ್ಶನವನ್ನು ಬಳಸಲು ಸುಲಭ ಮತ್ತು ವೇಗಗೊಳಿಸುತ್ತದೆ ಎಂದು ಗೂಗಲ್ ಹೇಳಿದೆ. ಹೊಸ ಲುಕ್​ನ ಸೆಟ್ಟಿಂಗ್‌ಗಳಲ್ಲಿ ಬಹಳಷ್ಟು ಬದಲಾವಣೆಗಳಿರುತ್ತವೆ. ನೋಟಿಫಿಕೇಷನ್​, ಕಲರ್​ ಥೀಮ್‌, ಫೋಟೋಗಳು, ಜಿ-ಮೇಲ್, ಕ್ಲಾಕ್​ ಇತ್ಯಾದಿ ಈ ಅಪ್ಡೇಟ್​ನ ಒಂದು ಭಾಗವಾಗಿದೆ.

'ಮೆಟೀರಿಯಲ್ 3 ಎಕ್ಸ್‌ಪ್ರೆಸ್ಸಿವ್ ರೀಡಿಸೈನ್' ಅಪ್ಡೇಟ್​ ಅಡಿಯಲ್ಲಿ ಆ್ಯಂಡ್ರಾಯ್ಡ್ ಫೋನ್‌ಗಳ ಕಾಲ್​ ಅಪ್ಲಿಕೇಶನ್‌ನ ವಿನ್ಯಾಸವನ್ನು ಬದಲಾಯಿಸಿದೆ ಎಂದು ಗೂಗಲ್ ಘೋಷಿಸಿದೆ. ಈ ನವೀಕರಣವು ಮೊದಲು ಜೂನ್‌ನಲ್ಲಿ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಆದರೀಗ, ಇದನ್ನು ಹಂತಗಳಲ್ಲಿ ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲಾಗಿದೆ. ಗೂಗಲ್ ಪ್ರಕಾರ, ಕರೆ ಮಾಡುವ ಅಪ್ಲಿಕೇಶನ್ ಅನ್ನು ಬಳಸಲು ಸುಲಭಗೊಳಿಸುವುದು ಇದರ ಉದ್ದೇಶವಾಗಿದೆ.

ಹೊಸ ಸೆಟ್ಟಿಂಗ್‌ಗಳ ಪ್ರಕಾರ, ಈಗ ಒಂದೇ ಸಂಖ್ಯೆಯಿಂದ ಬರುವ ಎಲ್ಲಾ ಕರೆಗಳು ಒಂದೇ ಸ್ಥಳದಲ್ಲಿ ಕಾಣಿಸುವುದಿಲ್ಲ. ಬದಲಿಗೆ, ಅವು ಸಮಯಕ್ಕೆ ಅನುಗುಣವಾಗಿ ಕಾಲ್​ ಇತಿಹಾಸದಲ್ಲಿ ಮಾತ್ರ ಗೋಚರಿಸುತ್ತವೆ. ಇದರೊಂದಿಗೆ, ಬಳಕೆದಾರರು ತಮ್ಮ ಕಾಲ್​ ಹಿಸ್ಟರಿಯನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು ಎಂದು ಗೂಗಲ್ ಹೇಳುತ್ತದೆ. ಎಷ್ಟು ಮಿಸ್ಡ್ ಕಾಲ್‌ಗಳಿವೆ, ಕರೆಗಳು ಬಂದಿವೆ ಎಂಬುದನ್ನು ನೋಡಲು ಪ್ರತಿ ಸಂಖ್ಯೆಯನ್ನು ಪ್ರತ್ಯೇಕವಾಗಿ ಈಗ ತೆರೆಯುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಅರಿವಿಗೆ ಬಾರದಂತೆ ಬದಲಾವಣೆ ಹೇಗೆ?

ಸೆಟ್ಟಿಂಗ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿದ್ದರೂ ಮತ್ತು ಸಂದೇಶ, ಸೂಚನೆ ಇಲ್ಲದೆ ಬದಲಾಗಿದ್ದೇಗೆ ಎಂದು ಅನೇಕ ಪ್ರಶ್ನಿಸಿದ್ದಾರೆ. ಒಂದಷ್ಟು ಬಳಕೆದಾರರು ತಮ್ಮ ಫೋನ್‌ನ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಟೋ ಅಪ್ಡೇಟ್​ ಸಕ್ರಿಯಗೊಳಿಸಿರಬಹುದು. ಇದರಿಂದ, ಕೆಲವು ಅಪ್ಲಿಕೇಶನ್‌ಗಳು ಸ್ವಯಂ ಅಪ್ಡೇಟ್​ ತೆಗೆದುಕೊಂಡಿರುತ್ತವೆ ಎಂದು ತಜ್ಞರು ವಿವರಿಸಿದ್ದಾರೆ. ಕೆಲವರು ಈ ಅಪ್ಡೇಟ್​ ಅನ್ನು ಕೊಡದ ಹಿನ್ನೆಲೆ ಈಗಲೂ ಹಳೆಯ ಮಾದರಿಯನ್ನೇ ಬಳಕೆ ಮಾಡುತ್ತಿರುವುದು ಕಾಣಬಹುದು.

ಹೊಸ ಅಪ್ಟೇಟ್​ ಬೇಡವಾದರೆ, ತಮ್ಮ ಹಳೆಯ ಡಿಸ್ಪ್ಲೇಯನ್ನು ಪಡೆಯಬಹುದಾಗಿದೆ. ಇದಕ್ಕೆ ಬಳಕೆದಾರರು, ತಮ್ಮ ಫೋನ್​ನ ಸೆಟ್ಟಿಂಗ್‌ಗೆ ಹೋಗಿ, ಆಟೋ-ಅಪ್ಡೇಟ್​ ಅನ್ನು ಕ್ಯಾನ್ಸಲ್ ಮಾಡಬೇಕು. ಹೀಗೆ ಮಾಡಿಕೊಂಡರೆ ನಿಮಗೆ ಹೊಸ ವಿನ್ಯಾಸ ಕಣ್ಮರೆಯಾಗುತ್ತದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net