

| ರಮೇಶ ದೊಡ್ಡಪುರ ಬೆಂಗಳೂರು
ರಾಜ್ಯದ ಖಾಸಗಿ ಆಸ್ಪತ್ರೆಗಳು ಬಡವರಿಗೆ ಗಗನಕುಸುಮ ಎಂಬ ಅಪವಾದಕ್ಕೆ ಮತ್ತಷ್ಟು ಪುರಾವೆ ಸಿಕ್ಕಿದೆ. ಆರೋಗ್ಯಯುತ ಶಿಶುಗಳು ಜನಿಸಲಿ ಎಂಬ ಕಾರಣಕ್ಕೆ ಸರ್ಕಾರಗಳಿಂದ ಅನೇಕ ಯೋಜನೆ, ಸೌಲಭ್ಯ ನೀಡಲಾಗು ತ್ತಿದ್ದರೂ ಖಾಸಗಿ ಆಸ್ಪತ್ರೆಗಳು ಹಣದಾಸೆಗಾಗಿ ಸಿಸೇರಿಯನ್ಗೆ ಒತ್ತು ನೀಡುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುವುದಕ್ಕಿಂತ 2 ಪಟ್ಟು ಹೆಚ್ಚು ಸಿಸೇರಿಯನ್ ಹೆರಿಗೆಗಳು ಖಾಸಗಿಯಲ್ಲಿ ನಡೆ ಯುತ್ತಿವೆ. 15 ವರ್ಷದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಪ್ರಮಾಣ ಶೇ.5 ಹೆಚ್ಚಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ನಾಲ್ಕು ಪಟ್ಟು (ಶೇ.20) ಹೆಚ್ಚಳವಾಗಿದೆ. ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5’ (ಎನ್ಎಫ್ಎಚ್ಎಸ್-5) ವರದಿ ಈ ಚಿತ್ರಣವನ್ನು ತೆರೆದಿಟ್ಟಿದೆ.
ಸರ್ಕಾರಿಯತ್ತಲೇ ಒಲವು: 2005-06ರ ಎನ್ಎಫ್ಎಚ್ಎಸ್-3ರ ಸಮೀಕ್ಷೆ ಪ್ರಕಾರ, ರಾಜ್ಯದಲ್ಲಿ ಶೇ.64 ಹೆರಿಗೆ ಮಾತ್ರವೇ ಸಾಂಸ್ಥಿಕವಾಗಿದ್ದವು (ಆಸ್ಪತ್ರೆ, ಆರೋಗ್ಯ ಕೇಂದ್ರ). 2015-16ರಲ್ಲಿ ಈ ಪ್ರಮಾಣ ಶೇ.94 ಹಾಗೂ 2019-20ರಲ್ಲಿ ಶೇ.97ಕ್ಕೆ ಹೆಚ್ಚಿದೆ. ಶೇ.3 ಹೆರಿಗೆ ಮಾತ್ರವೇ ಮನೆಯಲ್ಲಿ ನಡೆಯುತ್ತಿವೆ. ಇದೇ ಸಮೀಕ್ಷೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಕ್ರಮವಾಗಿ ಶೇ.34.8, ಶೇ.61.2 ಹಾಗೂ ಇದೀಗ ಶೇ.64.8ರಂತೆ ಏರಿಕೆಯತ್ತಲೇ ಸಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಹೆಚ್ಚುತ್ತಿರುವ ಜತೆಗೆ ಖಾಸಗಿಯಲ್ಲಿ ಹಣ ತೆರಲಾಗದ ಸ್ಥಿತಿಯೂ ಇದಕ್ಕೆ ಕಾರಣ.
ಒಟ್ಟು ಸಿಸೇರಿಯನ್ ಹೆರಿಗೆಗಳು 2005-06ರ ಶೇ.15.5, 2015-16ರ ಶೇ.23.6ರಿಂದ 2019-20ರಲ್ಲಿ ಶೇ.31.6ಕ್ಕೆ ಹೆಚ್ಚಳವಾಗಿದೆ. ಈ 15 ವರ್ಷದ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಪ್ರಮಾಣ ಶೇ.17.2ರಿಂದ ಶೇ.22.6ಕ್ಕೆ ಏರಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.31.9ರಿಂದ ಶೇ.52.5ಕ್ಕೆ ಹೆಚ್ಚಳವಾಗಿದೆ.
ಸರಣಿ ಬರೆ: ದೇಶದ ಪ್ರತಿಷ್ಠಿತ ಆಸ್ಪತ್ರೆಗಳು 2022ರಲ್ಲಿ ಚಿಕಿತ್ಸಾ ವೆಚ್ಚ ಹೆಚ್ಚಳಕ್ಕೆ ಸಿದ್ಧತೆ ಆರಂಭಿಸಿವೆ. ಕರೊನಾ ಸಂಕಷ್ಟದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಕೊಡಿಸಲಾಗದ ನೂರಾರು ಬಡವರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚಿಕಿತ್ಸಾ ವೆಚ್ಚ ಹೆಚ್ಚಳವಾದರೆ ಬಡವರ ಪಾಲಿಗೆ ಖಾಸಗಿ ಆಸ್ಪತ್ರೆಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಲಿವೆ.
ಮೇನಕಾ ಗಾಂಧಿ ಪತ್ರ: ದೇಶದಲ್ಲಿ ಖಾಸಗಿ ಆಸ್ಪತ್ರೆಗಳ ಹಣದಾಸೆಯಿಂದಾಗಿ ಅನವಶ್ಯಕ ಸಿಸೇರಿಯನ್ ಚಿಕಿತ್ಸೆ ಪ್ರಮಾಣ ಹೆಚ್ಚಾಗುತ್ತಿದ್ದು, ಸರ್ಕಾರದಿಂದ ಕ್ರಮ ಕೈಗೊಳ್ಳಬೇಕು ಎಂದು 2017ರಲ್ಲಿ ಮುಂಬೈನ ಮಹಿಳೆಯೊಬ್ಬರು ಆನ್ಲೈನ್ ಪಿಟಿಷನ್ ಆರಂಭಿಸಿದ್ದರು. ದೇಶಾದ್ಯಂತ 1.3 ಲಕ್ಷಕ್ಕೂ ಹೆಚ್ಚು ಜನರು ಇದಕ್ಕೆ ಸಮ್ಮತಿ ಸೂಚಿಸಿ, ಆಸ್ಪತ್ರೆಗಳು ನಡೆಸಿದ ಸಾಮಾನ್ಯ ಹಾಗೂ ಸಿಸೇರಿಯನ್ ಚಿಕಿತ್ಸೆ ವಿವರಗಳನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದ್ದರು. ಅಂದಿನ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಮೇನಕಾ ಗಾಂಧಿ ಸಹ ಇದಕ್ಕೆ ಸಮ್ಮತಿ ಸೂಚಿಸಿ, ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದರು.
ಆಹಾರ ವ್ಯತ್ಯಾಸವೂ ಕಾರಣ: ವೈದ್ಯರು ಸೂಚಿಸಿದ ಆಹಾರ ಪಥ್ಯವನ್ನು ಗರ್ಭಿಣಿಯರು ಪಾಲಿಸದ ಕಾರಣಕ್ಕೆ ಗರ್ಭಿಣಿ ಹಾಗೂ ಮಗುವಿನ ತೂಕ ಹೆಚ್ಚಾಗುತ್ತಿರುವುದೂ ಸಿಸೇರಿಯನ್ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ಸ್ತ್ರೀರೋಗತಜ್ಞೆ ಡಾ. ವಿದ್ಯಾ ಭಟ್. ಯಾವುದೇ ವೈದ್ಯರು ಅನಗತ್ಯವಾಗಿ ಸಿಸೇರಿಯನ್ ಮಾಡಲು ಬಯಸುವುದಿಲ್ಲ. ಅನಿವಾರ್ಯ ಹಾಗೂ ಕೆಲವೇ ಸಂದರ್ಭದಲ್ಲಿ ಮಾಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಮಹಿಳೆಯರು ಎಷ್ಟೇ ಡಯಟ್ ಸೂಚಿಸಿದರೂ, ಅದನ್ನು ಸಮರ್ಪಕವಾಗಿ ಪಾಲಿಸದೆ ಪ್ರತಿ ಬಾರಿ ತಪಾಸಣೆಗೆ ಬಂದಾಗಲೂ 2-3 ಕೆ.ಜಿ. ತೂಕ ಹೆಚ್ಚಿಸಿಕೊಂಡಿರುತ್ತಾರೆ. ಇದರಿಂದಾಗಿ ಹುಟ್ಟುವ ಮಗುವಿನ ತೂಕವೂ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಮಗುವಿನ ತೂಕ 2.5-3 ಕೆ.ಜಿ. ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನಿಸುತ್ತಿರುವ ಮಗುವಿನ ತೂಕ 3.5 ರಿಂದ 4.5ರವರೆಗೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಹಜ ಹೆರಿಗೆ ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸುತ್ತಾರೆ.
ದೇಶದಲ್ಲೂ ಏರಿಕೆ: ಒಟ್ಟಾರೆ ದೇಶದಲ್ಲೂ ಸಿಸೇರಿಯನ್ ಹೆರಿಗೆಗಳು ಹೆಚ್ಚಳವಾಗಿವೆ. ಒಟ್ಟು ಸಿಸೇರಿಯನ್ ಹೆರಿಗೆ 2015-16ರ ಶೇ.17.2ರಿಂದ ಇದೀಗ ಶೇ.21.5ಕ್ಕೆ ಏರಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಸಿಸೇರಿಯನ್ ಶೇ.11.9ರಿಂದ ಶೇ.14.3ಕ್ಕೆ ಅಂದರೆ ಶೇ.2.4 ಹೆಚ್ಚಳವಾಗಿದೆ. ಅದೇ ಖಾಸಗಿ ಆಸ್ಪತ್ರೆಗಳಲ್ಲಿ ಶೇ.40.9ರಿಂದ ಶೇ.47.4ಕ್ಕೆ ಅಂದರೆ ಶೇ.6.5 ಏರಿಕೆ ಕಂಡಿದೆ.
ಇತ್ತೀಚಿನ ದಿನಗಳಲ್ಲಿ ವಿವಾಹ ವಿಳಂಬ ಸೇರಿ ಜೀವನ ಶೈಲಿಯ ಬದಲಾವಣೆಯಿಂದಾಗಿ ಫಲವತ್ತತೆ ಸಮಸ್ಯೆ ಹೆಚ್ಚುತ್ತಿದೆ. ಹೀಗಾಗಿ ಐವಿಎಫ್ ಚಿಕಿತ್ಸೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಇಂತಹವರಲ್ಲಿ ಸಹಜ ಹೆರಿಗೆ ಕಡಿಮೆ. ಗರ್ಭಿಣಿಯರಲ್ಲಿ ಮಧುಮೇಹ, ಅಧಿಕ ರಕ್ತದ ಒತ್ತಡ ಸಹ ಸಿಸೇರಿಯನ್ಗೆ ಕಾರಣವಾಗಿದೆ.
| ಡಾ.ವಿದ್ಯಾ ಭಟ್ ಸ್ತ್ರೀರೋಗ ತಜ್ಞೆ
ಸರ್ಜರಿಯಿಂದ ಏನು ಲಾಭ?: ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆಗೆ ಅಂದಾಜು 30 ಸಾವಿರ ರೂ. ಇದ್ದರೆ, ಸಿಸೇರಿಯನ್ಗೆ 50 ಸಾವಿರ ರೂ.ಗೂ ಹೆಚ್ಚು ಆಗುತ್ತದೆ. ವಿಮಾ ಕಂಪನಿಗಳು ಸಾಮಾನ್ಯ ಹೆರಿಗೆ ಹೋಲಿಕೆಯಲ್ಲಿ ಹೆಚ್ಚು ಮೊತ್ತವನ್ನು ಸಿಸೇರಿಯನ್ಗೆ ನೀಡುತ್ತವೆ. ಸಾಮಾನ್ಯ ಹೆರಿಗೆ ನಂತರ 1-2 ದಿನದಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಿದರೆ ಸಿಸೇರಿಯನ್ ನಂತರ ಕನಿಷ್ಠ 1 ವಾರ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಈ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಸಿಸೇರಿಯನ್ಗೆ ಒಲವು ತೋರುತ್ತವೆ. ಕೆಲವೊಮ್ಮೆ ಹೆರಿಗೆ ನೋವಿಗೆ ಹೆದರುವ ಗರ್ಭಿಣಿಯರೂ ಸಿಸೇರಿಯನ್ನತ್ತ ಮನಸು ಮಾಡುತ್ತಾರೆ. ಮಗು ಉತ್ತಮ ಘಳಿಗೆಯಲ್ಲಿ ಜನಿಸಬೇಕು ಎಂದು ಜ್ಯೋತಿಷಿಗಳಿಂದ ದಿನಾಂಕ ಸಮಯ ನಿಗದಿಪಡಿಸಿಕೊಂಡು ಅದೇ ಸಮಯಕ್ಕೆ ಸಿಸೇರಿಯನ್ ಮಾಡಿಸಿಕೊಳ್ಳುವವರೂ ಇದ್ದಾರೆ ಎಂದು ವೈದ್ಯರೊಬ್ಬರು ಅಭಿಪ್ರಾಯಪಡುತ್ತಾರೆ.