ಏತ ನಿರ್ವಹಣೆ ಖಾಸಗಿಗೆ; ಕರಡು ನೀತಿ, ಮಾರ್ಗಸೂಚಿಗಳಿಗೆ ಸಂಪುಟ ಸಭೆ ಅನುಮೋದನೆ

6256
Published on

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಡಿ ಏತ ನೀರಾವರಿ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕರಡು ನೀತಿ ಹಾಗೂ ಮಾರ್ಗಸೂಚಿಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈ ಕರಡು ಅಧಿಸೂಚನೆಯಂತೆ ಏತ ನೀರಾವರಿ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಖಾಸಗಿಯವರಿಗೆ ಗುತ್ತಿಗೆ ಕೊಡಲು ಸರ್ಕಾರ ನಿರ್ಧರಿಸಿದೆ.

ನಿರ್ವಹಣಾ ಸಮಸ್ಯೆಗಳು: ಸ್ಥಳೀಯ ಕಾರ್ಯಾಚರಣೆ ಮತ್ತು ನಿರ್ವಹಣಾ ಏಜೆನ್ಸಿಗಳಲ್ಲಿ ವೃತ್ತಿಪರತೆ ಕೊರತೆ, ಅನನುಭವಿ ಸಿಬ್ಬಂದಿ ಕಾರ್ಯಾಚರಣೆ, ಪ್ರಮುಖ ಸ್ಥಾವರ ಹಾಗೂ ಯಂತ್ರೋಪಕರಣಗಳ ನೈಜ ಸಮಯದ ಕಾರ್ಯಕ್ಷಮತೆಯ ಮಾಹಿತಿ ಕೊರತೆ, ಯಂತ್ರಗಳ ಕಾರ್ಯಕ್ಷಮತೆ ಮತ್ತು ವಸ್ತುಸ್ಥಿತಿಯ ನಿರಂತರ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ, ನಿರ್ವಹಣಾ ವೆಚ್ಚದಲ್ಲಿ ಗಮನಾರ್ಹವಾದ ಕಡಿತ, ಸೇವಾ ವಿತರಣೆಯಲ್ಲಿ ಗಮನಾರ್ಹ ಸುಧಾರಣೆ ಮತ್ತು ಏತ ನೀರಾವರಿ ಯೋಜನೆಗಳ ಸುಸ್ಥಿರ ಕಾರ್ಯಾಚರಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಕರಡು ನೀತಿ ಮತ್ತು ಮಾರ್ಗಸೂಚಿಗಳನ್ನು ಸರ್ಕಾರ ಸಿದ್ಧಪಡಿಸಿದ್ದು, ಅದಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಸಮಸ್ಯೆ ನಿವಾರಣೆಗೆ ಗುತ್ತಿಗೆ ನಿರ್ಧಾರ: ಸಚಿವ ಸಂಪುಟ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಏತ ನೀರಾವರಿ ಯೋಜನೆಗಳ ಕಾರ್ಯಕ್ಷಮತೆ ಸಮಸ್ಯೆಗಳನ್ನು ನಿವಾರಿಸುವ ದೃಷ್ಟಿಯಿಂದ ಸಾಮಾನ್ಯ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ನೀತಿಯ ಪ್ರಮುಖ ಉದ್ದೇಶ: ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತ ಸ್ಥಳಗಳಲ್ಲಿ ಅಗತ್ಯವಾದ ಪ್ರಶರ್/ ಹೆಡ್​ನೊಂದಿಗೆ ಬೆಳೆಗಳಿಗೆ ನೀರಿನ ಅವಶ್ಯಕತೆಯ ಅನುಗುಣವಾಗಿ ನೀರಾವರಿ ವೇಳಾಪಟ್ಟಿಯ ಪ್ರಕಾರ, ನೀರನ್ನೊದಗಿಸುವುದು ಮತ್ತು ಕೆರೆ ತುಂಬುವ ಅವಶ್ಯಕತೆಗಳನ್ನು ಸುಸ್ಥಿರ ಮಿತವ್ಯಯಕಾರಿ ಕಾರ್ಯಾಚರಣೆ ಮೂಲಕ ಪೂರೈಸುವುದು, ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಮಿತವ್ಯಯಕಾರಿ ಕಾರ್ಯಾಚರಣೆ ಮತ್ತು ನಿರ್ವಹಣೆ ಮತ್ತು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು ಈ ನೀತಿಯ ಉದ್ದೇಶವಾಗಿದೆ.

ಮಾರ್ಗಸೂಚಿಶಿಫಾರಸುಗಳ ಸಾರ
  • ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಕಾರ್ಯಾಚರಣೆ ದಕ್ಷತೆಯನ್ನು ಸುಧಾರಿಸುವುದು ಮತ್ತು ಕಾರ್ಯಕ್ಷಮತೆ ಕಾಯ್ದುಕೊಳ್ಳುವುದು.
  • ಏತ ನೀರಾವರಿ ಯೋಜನೆಗಳ ಅಂದಾಜು ತಯಾರಿಸಲು ಮಾರ್ಗಸೂಚಿ ಕಾರ್ಯಾಚರಣೆ ಹಾಗೂ ನಿರ್ವಹಣೆ ಒಪ್ಪಂದಗಳಿಗೆ ಟೆಂಡರ್ ಸಿದ್ಧಪಡಿಸಲು ಮಾರ್ಗಸೂಚಿ.
ಪ್ರಮುಖ ನಿರ್ಣಯಗಳು
  • ಜಿಲ್ಲಾ ನ್ಯಾಯಾಧೀಶರ ಕೆಳಹಂತದ ನ್ಯಾಯಾಂಗ ಸೇವೆ ಅಧಿಕಾರಿಗಳಿಗೆ ಆರನೇ ವೇತನ ಆಯೋಗದ ಶಿಫಾರಸು ಪ್ರಕಾರ ವೇತನ, ಭತ್ಯೆ ಪರಿಷ್ಕರಣೆ. ಹಿಂಬಾಕಿ ಸಹಿತ ಪಾವತಿಗೆ ಅಸ್ತು, 300 ಕೋಟಿ ರೂ. ವೆಚ್ಚ.
  • ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ 18 ವೈದ್ಯಕೀಯ ಸಂಸ್ಥೆಗಳ ಅರಿವಳಿಕೆ ಕಾರ್ಯಸ್ಥಾವರ ಮತ್ತು ರೋಗಿಯ ನಿಗಾ ವಹಿಸುವ ಉಪಕರಣಗಳ ಖರೀದಿಗೆ 33.92 ಕೋಟಿ ರೂ. ವೆಚ್ಚ.
  • ಪ್ರಸಕ್ತ ಹಣಕಾಸು ವರ್ಷ (2022-23)ದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ 250 ಕೋಟಿ ರೂ. ಕರ್ನಾಟಕ ನೀರಾವರಿ ನಿಗಮ 850 ಕೋಟಿ ರೂ. ಅವಧಿ ಸಾಲ ಪಡೆಯಲು ಸರ್ಕಾರದ ಖಾತರಿ.
  • ಕರ್ನಾಟಕ ಕೃಷಿ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು, 2022ಕ್ಕೆ ಅನುಮೋದನೆ.
  • ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಡಚ್ ನೆರವಿನ ಯೋಜನೆ ಹಾಗೂ ಇತರ ಯೋಜನೆಗಳಡಿ ನಿರ್ವಿುಸಿ ಪರಿಶಿಷ್ಟ ಜಾತಿ
  • ಕುಶಲಕರ್ವಿುಗಳಿಗೆ ಹಂಚಿಕೆ ಮಾಡಿರುವ ವಸತಿ ಕಾರ್ಯಾಗಾರಗಳು ಫಲಾನುಭವಿಗಳ ಹೆಸರಿಗೆ ನೋಂದಣಿ.
  • ಕರ್ನಾಟಕ ಲೋಕಸೇವಾ ಆಯೋಗದ 2020-21ನೇ ಸಾಲಿನ ವಾರ್ಷಿಕ ವರದಿ ಅಂಗೀಕಾರ.
  • ಕರ್ನಾಟಕ ಲೋಕಾಯುಕ್ತ ಸಂಸ್ಥೆಯ 2018-19, 2019-20 ಮತ್ತು 2020-21ನೇ ಸಾಲುಗಳ ವಾರ್ಷಿಕ ವರದಿ ಅಂಗೀಕಾರ.
  • ವಿಧಾನ ಮಂಡಲದ ಮುಂಗಾರು ಅಧಿವೇಶನ ಸಮಾಪ್ತಿ.
  • ಜಲಜೀವನ್ ಮಿಷನ್​ನಡಿ ಗ್ರಾಮೀಣ ಪ್ರದೇಶದ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸುವ ವಿವಿಧ ಜಿಲ್ಲೆಗಳ ಒಟ್ಟು 24 ಯೋಜನೆಗಳಿಗೆ ಸಮ್ಮತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net