ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ; ಮನೋರೋಗ ತಜ್ಞ ಡಾ. ಸಿ.ಆರ್. ಚಂದ್ರಶೇಖರ್ ಆಯ್ಕೆ

CRC
Published on

ಬೆಂಗಳೂರು: ಸುಪ್ರಸಿದ್ಧ ಮನೋರೋಗ ತಜ್ಞ ಡಾ. ಸಿ.ಆರ್ ಚಂದ್ರಶೇಖರ್ ಅವರು 2022 ನೇ ವರ್ಷದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎ.ವಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ತೀರ್ಮಾನವನ್ನು ಅಂಗೀಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಕ್ಟೋಬರ್ 2 ಗಾಂಧಿ ಜಯಂತಿಯಂದು ನಗರದ ಗಾಂಧೀ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐದು ಲಕ್ಷ ರೂ. ಒಳಗೊಂಡ ರಾಜ್ಯ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ರಾಷ್ಟ್ರೀಯ ಮಾನಸಿಕ ಮತ್ತು ನರರೋಗಗಳ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಯಲ್ಲಿ 45 ಕ್ಕೂ ಹೆಚ್ಚು ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳಿಗೆ ಶಿಕ್ಷಣಧಾರೆ ಎರೆದಿದ್ದಾರೆ. ಸುಮಾರು 50,000 ಕ್ಕೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಸೇವೆ ಸಲ್ಲಿಸಿದ ನಿಮ್ಹಾನ್ಸ್ ಸಂಸ್ಥೆಗೆ 1.09 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ 280 ಮತ್ತು ಆಂಗ್ಲ ಭಾಷೆಯಲ್ಲಿ 40 ಪುಸ್ತಕಗಳನ್ನು ಬರೆದಿದ್ದಾರೆ.

ಈ ಎಲ್ಲಾ ಗಮನಾರ್ಹ ಸಾಧನೆಗಳನ್ನು ಪರಿಗಣಿಸಿ ಡಾ. ಸಿ. ಆರ್. ಚಂದ್ರಶೇಖರ್ ಅವರಿಗೆ 2022 ನೇ ಸಾಲಿನ ರಾಜ್ಯ ಸರ್ಕಾರದ ಪ್ರತಿಷ್ಠಿತ 'ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ' ಪ್ರದಾನ ಮಾಡಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್. ಹರ್ಷ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net