

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ನಮಗೂ ಶಾಕ್ ತಂದಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸದ್ಯ ಸಂತೋಷ್ ಚೇತರಿಸಿಕೊಳ್ಳುತ್ತಿದ್ದಾರೆ. ಇವತ್ತು ಅವರನ್ನು ಜನರಲ್ ವಾರ್ಡ್ಗೆ ಶಿಫ್ಟ್ ಮಾಡ್ತಾರೆ. ಅವರು ಗುಣಮುಖರಾದ ಮೇಲೆ ಕೂತು ಚರ್ಚೆ ಮಾಡ್ತೇವೆ ಎಂದು ಸುದ್ದಿಗಾರರಿಗೆ ವಿಜಯೇಂದ್ರ ಪ್ರತಿಕ್ರಿಯಿಸಿದರು.
ಸಂತೋಷ್ ರಾಜೀನಾಮೆ ಕೊಟ್ಟಿದ್ದಾರೆ ಅಂತ ಊಹಾಪೋಹ ಹಬ್ಬಿದೆ. ಇಂತಹ ಊಹಾಪೋಹಗಳಿಗೆ ನಾನು ಉತ್ತರಿಸಲ್ಲ. ಮರಿಸ್ವಾಮಿ ಕಾವೇರಿ ನಿವಾಸಕ್ಕೆ ಬರೋದು ಹೊಸದಲ್ಲ. ಸಂತೋಷ್ಗೆ ರಾಜೀನಾಮೆ ಕೊಡಿ ಅಂತ ಯಾರೂ ಕೇಳಿಲ್ಲ. ಯಾರಿಗೆ ಯಾವ ಸ್ಥಾನವನ್ನ ಕೊಡಬೇಕು ಅನ್ನೋದು ಮುಖ್ಯಮಂತ್ರಿಗಳಿಗೆ ಗೊತ್ತಿದೆ ಎಂದು ವಿಜಯೇಂದ್ರ ತಿಳಿಸಿದರು.
ಶುಕ್ರವಾರ ಸಂಜೆ ಸಂತೋಷ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಂದು ರಾತ್ರಿಯೇ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಇನ್ನು ಸಂತೋಷ್ ಆತ್ಮಹತ್ಯೆ ಯತ್ನ ಸಂಬಂಧ ಕಾರವಾರದಲ್ಲಿ ಶನಿವಾರ ಬಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಯಾವುದೋ ವೈಯಕ್ತಿಕ ವಿಡಿಯೋ ಎತ್ತಿಕೊಂಡು ಹೋಗಿ ಎಂಎಲ್ಸಿ ಮತ್ತು ಸಚಿವರಿಗೆ ಕೊಟ್ಟ ಮಾಹಿತಿ ಎರಡ್ಮೂರು ತಿಂಗಳ ಹಿಂದೇ ಇತ್ತು. ಎಂಎಲ್ಸಿ ಮತ್ತು ಮಂತ್ರಿ ಇಬ್ಬರೂ ಸೇರಿ ಸಿಎಂ ಹಾಗೂ ಸಂತೋಷ್ಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು ಎಂದು ಕೇಳಿದ್ದೆ. ಅದೇ ವಿಚಾರವಾಗಿ ಬೇಸರಗೊಂಡು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.