ಸಂತೋಷ್​ ಆತ್ಮಹತ್ಯೆ ಯತ್ನಕ್ಕೆ ರಹಸ್ಯ ವಿಡಿಯೋ ಕಾರಣ! ಹೊಸ ಬಾಂಬ್​ ಸಿಡಿಸಿದ ಡಿಕೆಶಿ

Santhosh DKS
Published on

ಕಾರವಾರ: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ರಹಸ್ಯ ವಿಡಿಯೋ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಕಾರವಾರದಲ್ಲಿ ಶನಿವಾರ ಮಾಧ್ಯಮ‌ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಾವುದೋ ಒಂದು ವೈಯಕ್ತಿಕ ವಿಡಿಯೋ ಎತ್ತಿಕೊಂಡು ಹೋಗಿ, ಎಂಎಲ್​ಸಿಗೆ ಹಾಗೂ ಸಚಿವರಿಗೆ ಕೊಟ್ಟ ಮಾಹಿತಿ ಎರಡು ಮೂರು ತಿಂಗಳ ಹಿಂದೇ ಇತ್ತು. ಎಂಎಲ್​ಸಿ ಮತ್ತು ಮಂತ್ರಿ ಇಬ್ಬರೂ ಸೇರಿ ಸಿಎಂ ಹಾಗೂ ಸಂತೋಷ್​ಗೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಕೇಳಿದ್ದೆ. ಅದರ ಸಂತ್ಯಾಂಶ ಏನಿದೆ ಎಂದು ಗೊತ್ತಿಲ್ಲ. ಅದೇ ವಿಚಾರವಾಗಿ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದರು.

ಪ್ರಕರಣದಲ್ಲಿ ಗೌಪ್ಯವಾದ ವಿಚಾರ ಅಡಗಿದೆ. ಸರ್ಕಾರ ತನಿಖೆ ಮಾಡಿ ಅರ್ಥವಿಲ್ಲ ಎಂದು ಹೇಳಿದ ಡಿಕೆಶಿ, ಎಂಎಲ್​ಸಿ, ಸಚಿವರು ಯಾರು ಎಂಬ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಲಿಲ್ಲ.

ಸಿದ್ದರಾಮಯ್ಯ ಅವರು ಮಾದಕ ದ್ರವ್ಯದಿಂದ ಸರ್ಕಾರ ನಡೆಸುತ್ತಿದ್ದರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೇಶಿ, ನಳೀನ್​ ಕುಮಾರ್ ಕಟೀಲ್​ಗೆ ಏನೋ ಹೆಚ್ಚು ಕಡಿಮೆಯಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಬೇಕು. ನಾನು ಕೂಡ ಅದೇ ಸರ್ಕಾರದಲ್ಲಿದ್ದೆ. ಸರ್ಕಾರವನ್ನು ಮಾದಕ ದ್ರವ್ಯದಿಂದ ನಡೆಸುತ್ತಿದ್ದಾರೆ ಎಂದಾದರೆ ಇವರು ಎಫ್ಐಆರ್ ಏಕೆ ಮಾಡಿಲ್ಲ. ಯಾವುದೋ ಸಣ್ಣಪುಟ್ಟ ನಟಿಯರನ್ನು ಹಿಡಿದಿದ್ದಾರಷ್ಟೆ ಎಂದರು.

ನಮ್ಮ‌ ಪಕ್ಷದಲ್ಲಿದ್ದವರೇ ಈಗ ಆ ಪಕ್ಷದಲ್ಲಿದ್ದಾರೆ. ಪ್ರಕರಣ ದಾಖಲಿಸಲಿ. ನಾನೇನೋ ಕಟೀಲ್ ಅವರಿಗೆ ಅಲ್ಪಸ್ವಲ್ಪ ಜ್ಞಾನ ಇದೆ ಎಂದುಕೊಂಡಿದ್ದೆ. ಕಟೀಲು ಒಂದು ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಆ ಸ್ಥಾನಕ್ಕೆ ಕಳಂಕ ತರುವ ಹೇಳಿಕೆ ನೀಡದಿರಲಿ. ಗೌರವದಿಂದ ನಡೆದುಕೊಳ್ಳುವುದನ್ನು ಕಲಿತುಕೊಳ್ಳಲಿ ಎಂದು ಟೀಕಿಸಿದರು.

ಪಕ್ಷ ಸಂಘಟನೆಗೆ ಎಲ್ಲ ಜಿಲ್ಲೆ ಪ್ರವಾಸ ಮಾಡುತ್ತಿದ್ದೇನೆ. ಗ್ರಾಮ ಪಂಚಾಯಿತಿ ಹಾಗೂ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಓಡಾಟ ನಡೆಸಿದ್ದೇ‌ನೆ. ಬಿಜೆಪಿ ಆಂತರಿಕ ಭಿನ್ನಾಭಿಪ್ರಾಯ ನಮಗೆ ಸಂಬಂಧವಿಲ್ಲ. ಮೊದಲು ನಮ್ಮ ಮನೆ ಸರಿ ಮಾಡಿಕೊಳ್ಳುತ್ತೇವೆ. ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕೆಲಸ ಮಾಡುವವರನ್ನು ಮಾತ್ರ ಇಟ್ಟುಕೊಳ್ಳಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net