

ಹೊಳೆನರಸೀಪುರ: ರಾಜ್ಯ ಸರ್ಕಾರ ಕೆಎಂಎಫ್ ಮೂಲಕವೇ ಮೆಕ್ಕೆಜೋಳ ಖರೀದಿಗೆ ಮುಂದಾಗಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದರು.
ತಾಲೂಕು ಕಚೇರಿಯಲ್ಲಿ ಬುಧವಾರ ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಶು ಆಹಾರಕ್ಕಾಗಿ ವಾರ್ಷಿಕ 1,74,000 ಕ್ವಿಂಟಾಲ್ ಮೆಕ್ಕೆ ಜೋಳ ಬಳಕೆಯಾಗುತ್ತಿದೆ. ಅಗತ್ಯವಿರುವ ಮೆಕ್ಕೆ ಜೋಳವನ್ನು ಸರಬರಾಜು ಮಾಡಲು ಮೂವರಿಗೆ ಟೆಂಡರ್ ನೀಡಲಾಗಿದೆ. ಈ ಟೆಂಡರ್‌ದಾರರು ರೈತರಿಂದ ಮೆಕ್ಕೆ ಜೋಳವನ್ನು ಕ್ವಿಂಟಾಲ್‌ಗೆ 1,900 ರಿಂದ 2,000 ರೂ.ಗೆ ಖರೀದಿಸಿ ಕೆಎಂಎಫ್‌ಗೆ 2,500 ರೂ.ಗೆ ಮಾರಾಟ ಮಾಡಿ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಸರ್ಕಾರ ಯಾರೋ ಮೂವರನ್ನು ಉದ್ಧಾರ ಮಾಡುವುದನ್ನು ಬಿಟ್ಟು ರೈತರಿಂದ ನೇರವಾಗಿ ಖರೀದಿಸಬೇಕು ಎಂದು ಆಗ್ರಹಸಿದರು.
ಜಿಲ್ಲೆಯ ಹೇಮಾವತಿ ನಾಲೆಗಳಿಗೆ 15 ದಿನ ನೀರು ಬಿಟ್ಟು ರೈತರ ಅರೆಕಾಲಿಕ ಬೆಳೆಗೆ ಹಾಗೂ ಜಾನುವಾರುಗಳ ಕುಡಿಯುವ ನೀರಿಗೆ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಕಾಲುಬಾಯಿ ಲಸಿಕೆ ಅಭಿಯಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರಿಗೆ ಡೇರಿಯಿಂದ ಬೆಳೆ ಕಟಾವು ಯಂತ್ರ, ಕೊಟ್ಟಿಗೆ ಮ್ಯಾಟ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗಿದೆ ಎಂದು ಹೇಳಿದರು.
ತನಿಖೆಗೆ ಆಗ್ರಹ: ಮಂಗಳವಾರ ರಾತ್ರಿ ಗುತ್ತಿಗೆದಾರ ಚನ್ನರಾಯಪಟ್ಟಣದ ಅಶ್ವತ್ಥ್ ಅವರ ಕಾರನ್ನು ಸೂರನಹಳ್ಳಿ ಸಮೀಪ ಯಾರೋ ಅಡ್ಡಗಟ್ಟಿದ್ದಾರೆ. ನಾನು, ಅಶ್ವತ್ಥ್ ಕಾರಿನಲ್ಲೇ ಹೊಳೆನರಸೀಪುರದ ಮನೆಗೆ ಬಂದೆವು. ನನ್ನನ್ನು ಬಿಟ್ಟು ಅವರು ಚನ್ನರಾಯಪಟ್ಟಣಕ್ಕೆ ಹೊರಟರು. ಸೂರನಹಳ್ಳಿ ಸಮೀಪ ತೆರಳುತ್ತಿದ್ದಾಗ ಅವರ ಕಾರಿಗೆ ಮತ್ತೊಂದು ಕಾರು ಅಡ್ಡ ಬಂದಿದೆ. ಅಪಾಯವನ್ನು ಗ್ರಹಿಸಿದ ಅಶ್ವತ್ಥ್ ತಕ್ಷಣ ಕಾರಣನ್ನು ಹಿಂದಕ್ಕೆ ತೆಗೆದುಕೊಂಡು ಸ್ವಲ್ಪ ದೂರ ಹೋಗಿ ಮತ್ತೆ ಜೋರಾಗಿ ಮುಂದಕ್ಕೆ ಹೋಗಿದ್ದಾರೆ. ಮುಂದಕ್ಕೆ ಹೋಗುವಾಗ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಯಾವ ಉದ್ದೇಶಕ್ಕೆ ಹೀಗೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ನಮ್ಮ ಮನೆಯ ಮುಂದೆ ಒಂದು ಕಾರು ಘಟನೆ ನಡೆದ ದಿನ ಸಂಜೆಯಿಂದ ನಿಂತಿದ್ದು, ಅದರಲ್ಲಿದ್ದವರು ಸತತವಾಗಿ ದೂರವಾಣಿಯಲ್ಲಿ ಮಾತನಾಡುತ್ತಿರುವುದನ್ನು ಕೆಲವರು ನೋಡಿದ್ದಾರೆ. ಪೊಲೀಸರ ತನಿಖೆ ನಂತರ ಮಾಹಿತಿ ತಿಳಿಯಲಿದೆ ಎಂದರು.
ಆನೆಕನ್ನಂಬಾಡಿ, ಜಕ್ಕವಳ್ಳಿ, ಹೊಳೆನರಸೀಪುರ ಸೇರಿದಂತೆ ವಿವಿಧ ಗ್ರಾಮಗಳ ವಾಲ್ಮೀಕಿ ಜನಾಂಗದ ಮುಖಂಡರು, ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ತಾಲೂಕು ಕೃಷಿ ಅಧಿಕಾರಿ ಸಪ್ನಾ, ಮೀನುಗಾರಿಕೆ ಇಲಾಖೆ ಅಧಿಕಾರಿ ಸುಮಾ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೌಸರ್ ಅಹಮದ್ ಭಾಗವಹಿಸಿದ್ದರು.