

ಬೆಂಗಳೂರು: ಉದ್ಯಮಿಯ ಪುತ್ರನನ್ನು ಅಪಹರಿಸಿದ ಆರೋಪಿಗಳಿಬ್ಬರು ಒಂದು ಕೋಟಿ ರೂಪಾಯಿ ಕೊಡುವಂತೆ ಬೇಡಿಕೆ ಇರಿಸಿದ್ದು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ನಡೆದಿದ್ದ ಈ ಅಪಹರಣ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ.
ಫರ್ನಿಚರ್ ಇಂಡಸ್ಟ್ರೀಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ವಿಕಾಸ್ ಬೋರ ಎಂಬವರನ್ನು ಅಪಹರಿಸಿದ್ದ ಆರೋಪಿಗಳು, ಬಳಿಕ ಆತನ ತಂದೆ ಮಹೇಂದ್ರ ಕುಮಾರ್ಗೆ ಕರೆ ಮಾಡಿ ಒಂದು ಕೋಟಿ ರೂ. ನೀಡುವಂತೆ ಬೇಡಿಕೆ ಇರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ವಿಜಯನಗರ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆನಂದ್ ಮತ್ತು ಅಜ್ಗರ್ ಪಾಷಾ ಬಂಧಿತ ಆರೋಪಿಗಳು.
ಇದೇ ಸೆ. 23ರಂದು ಆರೋಪಿಗಳು ವಿಕಾಸ್ ಅವರನ್ನು ಅಪಹರಿಸಿದ್ದು, ಬಳಿಕ ಮಹೇಂದ್ರ ಕುಮಾರ್ಗೆ ಕರೆ ಮಾಡಿ, ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ ಎಂಬುದಾಗಿ ಹೇಳಿದ್ದರು. ಅಲ್ಲದೆ 1 ಕೋಟಿ ರೂಪಾಯಿ, ಜತೆಗೆ 15 ಕೆ.ಜಿ. ಚಿನ್ನ ಕೊಡುವಂತೆ ಬೇಡಿಕೆ ಇರಿಸಿದ್ದರು.
ಈ ಸಂಬಂಧದ ದೂರಿನ ಮೇರೆಗೆ ಪಶ್ಚಿಮ ವಿಭಾಗದ ಡಿಸಿಪಿ ವಿಶೇಷ ತಂಡ ರಚಿಸಿದ್ದು, ವಿಜಯನಗರ, ಮಾಗಡಿ ರೋಡ್, ಕಾಮಾಕ್ಷಿ ಪಾಳ್ಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಅಪಹರಣಕ್ಕೆ ಆನಂದ್ ಮತ್ತು ಅರ್ಜಿತ್ ಎಂಬಿಬ್ಬರು ಆರೋಪಿಗಳು ಸುಪಾರಿ ನೀಡಿದ್ದು, ತನ್ವೀರ್ ಸುಪಾರಿ ಪಡೆದಿದ್ದ. ಒತ್ತೆ ಹಣ ಪಡೆದುಕೊಳ್ಳಲು ಆನಂದ್ ಮತ್ತು ತನ್ವೀರ್ ತಂಡದ ಅಜ್ಗರ್ ಬಂದಿದ್ದಾಗ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೆ ಬಳಸಿದ್ದ ಕಾರು ಹಾಗೂ ಒಂದು ಮೊಬೈಲ್ಫೋನ್ ಆರೋಪಿಗಳಿಂದ ಜಪ್ತಿ ಮಾಡಿಕೊಳ್ಳಲಾಗಿದೆ. ಸದ್ಯ ಉಳಿದ ಆರು ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.