ಜಾಗಿಂಗ್ ಮಾಡುತ್ತಲೇ ಕುಸಿದು ಬಿದ್ದ ಏರ್​ಫೋರ್ಸ್ ಅಧಿಕಾರಿ ಸಾವು!

IAF
Published on

ಬೆಂಗಳೂರು: ಸಾರ್ವಜನಿಕರು ಹೃದಯಾಘಾತಕ್ಕೀಡಾಗಿ ಸಾಯುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ನಿನ್ನೆ ಇಂಥ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಂದು ಬೆಳ್ಳಂಬೆಳಗ್ಗೆ ಇನ್ನೊಬ್ಬರು ಕುಸಿದು ಬಿದ್ದು ಸಾವಿಗೀಡಾಗಿದ್ದು, ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಲ್ ಕ್ರೀಡಾ ಮೈದಾನದಲ್ಲಿ ಈ ಘಟನೆ ನಡೆದಿದೆ. ಜಾಗಿಂಗ್​ಗೆ ಎಂದು ಬಂದಿದ್ದ ಈ ವ್ಯಕ್ತಿ ಆ ಸಂದರ್ಭದಲ್ಲೇ ಕುಸಿದು ಬಿದ್ದಿದ್ದು, ಸ್ಥಳೀಯರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸಾವು ಸಂಭವಿಸಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಸಾವಿಗೀಡಾದ ವ್ಯಕ್ತಿ ಏರ್​ಫೋರ್ಸ್ ಅಧಿಕಾರಿ ಗೋಪಾಲ್ ಸಿಂಗ್ ರಾವತ್ (35) ಎಂದು ಗುರುಸಲಾಗಿದೆ. ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ನಿನ್ನೆ 31 ಪ್ರಯಾಣಿಕರಿದ್ದ ರಾಜಹಂಸ ಬಸ್ ಚಲಾಯಿಸುತ್ತಿದ್ದ ಚಾಲಕ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದು, ಈ ಸಂದರ್ಭ ಬಸ್ ಆಯತಪ್ಪಿ ಪಲ್ಟಿಯಾಗಿತ್ತು. ಹಾಗೆಯೇ ಕಾಂತಾರ ಸಿನಿಮಾ ನೋಡಲು ಹೋಗಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೀಡಾಗಿ ಚಿತ್ರಮಂದಿರದಲ್ಲೇ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net