ಗೊಂದಲದ ಗೂಡಾದ ಬಸ್​ ವ್ಯವಸ್ಥೆ; ಪ್ರಯಾಣಿಕರ ಪರದಾಟ

Mejestic
Published on

ಬೆಂಗಳೂರು: ಇಂದಿನಿಂದ ಬಸ್​ ಸಂಚಾರಕ್ಕೆ ಸರ್ಕಾರವೇನೋ ಅನುವು ಮಾಡಿಕೊಟ್ಟಿದೆ. ಆದರೆ, ಸರ್ಕಾರದ ಅವೈಜ್ಞಾನಿಕ ಸಂಚಾರ ಮಾರ್ಗಸೂಚಿಯು ಗೊಂದಲದ ಗೂಡಾಗಿದ್ದು, ಬಸ್​ ಸಿಬ್ಬಂದಿ ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ.

ಬೆಳಗ್ಗೆ ಏಳು ಗಂಟೆಯಿಂದ ರಾತ್ರಿ ಏಳು ಗಂಟೆಯವರೆಗೆ ಮಾತ್ರ ಸರ್ಕಾರ ಸಂಚಾರಕ್ಕೆ ಅನುಮತಿ ನೀಡಿದೆ. ಇದರಿಂದ ಖಷಿಯಾದ ಪ್ರಯಾಣಿಕರು ಬಸ್​ ನಿಲ್ದಾಣಗಳಿಗೆ ದೌಡಾಯಿಸಿದ್ದಾರೆ. ಆದರೆ ಬೀದರ್​ ಹಾಗೂ ರಾಯಚೂರು ಸೇರಿದಂತೆ ದೂರದ ಊರುಗಳಿಗೆ ನಿಗದಿತ 7 ಗಂಟೆ ಅವಧಿಯಲ್ಲಿ ಪ್ರಯಾಣಿಸಲು ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ. ಒಂದು ವೇಳೆ ಸಾಧ್ಯವಾದರೂ ಅಲ್ಲಿಂದ ತಮ್ಮ ಹಳ್ಳಿಗಳಿಗೆ ಹೋಗಲು ಅವರಿಗೆ ಬಸ್​ ವ್ಯವಸ್ಥೆ ಇರುತ್ತದೆಯೇ?. ನಂತರ ಅವರೇನು ಮಾಡಬೇಕೆಂಬುದನ್ನು ಯೋಚಿಸಬೇಕಾಗಿದೆ.

ಊಟದ ವ್ಯವಸ್ಥೆ ಹೇಗೆ?:

ದೂರದ ಪ್ರಯಾಣದ ವೇಳೆ ಮಾರ್ಗ ಮಧ್ಯೆ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಹೇಗೆ ಎಂಬುದು ಸಹ ಗೊಂದಲವನ್ನುಂಟು ಮಾಡಿದೆ. ಹೋಟೆಲ್​ಗಳನ್ನು ತೆರೆಯಲು ಅವಕಾಶವಿದ್ದರೂ ಪಾರ್ಸೆಲ್​ ಮಾತ್ರ ತೆಗೆದುಕೊಳ್ಳಲು ಅವಕಾಶ ಇದೆ. ಇನ್ನು ಪಾರ್ಸೆಲ್​ಗೆ ಸಮಯ ತೆಗೆದುಕೊಳ್ಳುವುದಲ್ಲದೇ, ಅದನ್ನು ತಂದು ಬಸ್​ನಲ್ಲಿ ತಿನ್ನುವ ವ್ಯವಸ್ಥೆ ಇದೆಯೇ? ಹೀಗಾಗಿ ದೂರದ ಊರುಗಳಿಗೆ ಪ್ರಯಾಣಿಸುವಾಗ ಯಾವ ಕ್ರಮಗಳನ್ನು ಅನುಸರಿಸಬೇಕೆಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸದಿರುವುದು ಇದೀಗ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ಪ್ರಯಾಣಿಕರ ಪರದಾಟ:

10 ಗಂಟೆಯ ನಂತರ ಉತ್ತರ ಕರ್ನಾಟಕದ ದೂರದ ಕೆಲವು ಊರುಗಳಿಗೆ ಬಸ್​ ಇರುವುದಿಲ್ಲ ಎಂಬ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕರ ಹೇಳಿಕೆ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿ ಮಾಡಿತು. ಈಗಾಗಲೇ ಬಸ್​ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಈ ಹೇಳಿಕೆಯಿಂದ ತಬ್ಬಿಬ್ಬಾಗಿದ್ದು, ಏನು ಮಾಡುವುದು ಎಂಬ ಯೋಚನೆಯಲ್ಲಿದ್ದರು. ಅಲ್ಲದೆ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಇದರಿಂದ ಎಚ್ಚೆತ್ತಿರುವ ಸರ್ಕಾರ ಉತ್ತರ ಕರ್ನಾಟಕಕ್ಕೆ ಬಸ್​​ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ, ಅವಧಿಯ ಮಿತಿ ಹೇರಿರುವುದರಿಂದ ನಿಗದಿತ ಸಮಯದಲ್ಲಿ ದೂರದ ಊರುಗಳಿಗೆ ಹೇಗೆ ತಲುಪುತ್ತಾರೆ ಎಂಬುದೇ ಇಲ್ಲಿ ಯಕ್ಷ ಪ್ರಶ್ನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net