ಮುಷ್ಕರಕ್ಕೆ ನೀಡಿದ ತಡೆಯಾಜ್ಞೆ 2 ದಿನ ವಿಸ್ತರಣೆ; ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ | Bus Strike

ವಿಜಯವಾಣಿ (10)
Published on

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಸಾರಿಗೆ ನೌಕರರು ಸರ್ಕಾರದ ಸಂಧಾನಕ್ಕೂ ಬಗ್ಗದೆ, 1 ದಿನ ಮುಷ್ಕರ ಮುಂದೂಡಬೇಕೆಂಬ ಹೈಕೋರ್ಟ್​ ಆದೇಶಕ್ಕೂ ಓಗೂಡದೆ ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದರು. ಅದಕ್ಕೀಗ, ತಾತ್ಕಾಲಿಕವಾಗಿ ತೆರೆ ಬಿದ್ದಿದೆ.

ಸಾರಿಗೆ ಮುಷ್ಕರಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಹೈಕೋರ್ಟ್​, ಮುಷ್ಕರಕ್ಕೆ ನೀಡಿದ ತಡೆಯಾಜ್ಞೆಯನ್ನು ಎರಡು ದಿನ ವಿಸ್ತರಿಸಿದೆ. ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಎಜಿ ಹೇಳಿದರು.  ನಿಮಗೆ ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ, ಜನಸಾಮಾನ್ಯರನ್ನು ಒತ್ತೆಯಾಗಿರಿಸುವುದನ್ನು ಸಹಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರನ್ನೊಳಗೊಂಡ ಪೀಠವು ತರಾಟೆಗೆ ತೆಗೆದುಕೊಂಡಿತು.

ಇದೇ ವೇಳೆ ಸಾರಿಗೆ ನೌಕರರು ಮುಷ್ಕರ ಮುಂದುವರಿಸಿದರೆ ಎಸ್ಮಾ ಅಡಿ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ಹೈಕೋರ್ಟ್​ ಸರ್ಕಾರಕ್ಕೆ ಸೂಚಿಸಿತು. ಬಳಿಕ ವಿಚಾರಣೆಯನ್ನು ಆ.7ಕ್ಕೆ ಮುಂದೂಡಿತು. ಕೋರ್ಟ್​ ಆದೇಶದ ಬೆನ್ನಲ್ಲೇ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್​ ಮಾತನಾಡಿ, "ಮುಷ್ಕರದಲ್ಲಿ ಭಾಗಿಯಾಗಿರುವ ಎಲ್ಲ ನೌಕರರು ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾತುಕತೆಗೆ ಕರೆದರೆ, ನಾವು ಹೋಗುತ್ತೇವೆ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net