

ಜೈಪುರ: ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಪ್ರಯಾಣಿಕರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಅಜ್ಮೇರ್ನಲ್ಲಿ ನಡೆದಿದೆ.
ಘಟನೆಯು ಅಜ್ಮೇರ್ ಜಿಲ್ಲೆಯ ನಾಸಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್‌ಗಢ್ ಪ್ರದೇಶದಲ್ಲಿ ನಡೆಯುತ್ತಿರುವ ಭೈರು ಬಾಬಾ ಜಾತ್ರೆಯಲ್ಲಿ ನಡೆದಿದೆ. ಬ್ರೇಕ್ ಫೇಲ್ಯೂರ್ನಿಂದ ದುರ್ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ನಾಸಿರಾಬಾದ್ ಪೊಲೀಸ್ ಠಾಣಾಧಿಕಾರಿ ರೋಷನ್ ಲಾಲ್, ಬೈರು ಬಾಬಾ ಜಾತ್ರೆ ನಡೆಯುತ್ತಿದ್ದ ಕೂಗಳತೆ ದೂರದಲ್ಲಿ ಈ ಘಟನೆ ನಡೆದಿದ್ದು, ಬಸ್ ನಿರ್ಗಮಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೆಎಲ್ಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರೇಕ್ ಫೇಲ್ಯೂರ್ನಿಂದ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ನಾಸಿರಾಬಾದ್ ಪೊಲೀಸ್ ಠಾಣಾಧಿಕಾರಿ ರೋಷನ್ ಲಾಲ್ ತಿಳಿಸಿದ್ದಾರೆ.