ಬಸ್ ಚಲಾಯಿಸುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಚಾಲಕ ಸಾವು!

Murigeppa
ಮುರಿಗೆಪ್ಪ
Published on

ವಿಜಯಪುರ: ಇತ್ತೀಚೆಗೆ ಹಠಾತ್ ಹೃದಯಾಘಾತದಿಂದ ಆಗುತ್ತಿರುವ ಸಾವಿನ ಪ್ರಕರಣಗಳು ಹೆಚ್ಚಾಗಿದ್ದು, ಇಂದು ಅಂಥದ್ದೇ ಇನ್ನೊಂದು ಪ್ರಕರಣ ವರದಿಯಾಗಿದೆ. ಬಸ್ ಚಲಾಯಿಸುತ್ತಿರುವಾಗಲೇ ಚಾಲಕರೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಈ ಘಟನೆ ನಡೆದಿದೆ. ಮುರಿಗೆಪ್ಪ ಅಥಣಿ ಎಂಬವರೇ ಸಾವಿಗೀಡಾದ ಚಾಲಕ. ಈ ಬಸ್​ ಕಲಬುರಗಿ ಜಿಲ್ಲೆ ಅಫಜಲಪುರದಿಂದ ವಿಜಯಪುರಕ್ಕೆ ಹೊರಟಿತ್ತು. ಈ ಸಂದರ್ಭದಲ್ಲಿ ಮಾರ್ಗಮಧ್ಯೆ ಈ ಪ್ರಕರಣ ನಡೆದಿದೆ.

ಬಸ್ ಹೆಡ್​​ಲೈಟ್ ಸಮಸ್ಯೆ ಇರುವುದರಿಂದ ಪ್ರಯಾಣಿಕರನ್ನು ಕೆಳಗೆ ಇಳಿಸಿ, ಈ ಬಸ್​ ಸಿಂದಗಿ ಡಿಪೋ ಕಡೆಗೆ ಹೊರಟಿತ್ತು. ಈ ದಾರಿಯಲ್ಲಿ ಮುರಿಗೆಪ್ಪಗೆ ಹೃದಯಾಘಾತವಾಗಿದೆ. ಇನ್ನೇನು ಬಸ್​ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್​ಗೆ ನುಗ್ಗಲಿದೆ ಎನ್ನುವಷ್ಟರಲ್ಲಿ ಕಂಡಕ್ಟರ್ ಶರಣು ಟಾಕಳಿ ಅವರು ಬ್ರೇಕ್​ ಅದುಮಿ ಬಸ್ ನಿಲ್ಲಿಸಿದ್ದಾರೆ.

ಬಸ್​ನಲ್ಲಿದ್ದ ಪ್ರಯಾಣಿಕರನ್ನು ಈ ಮೊದಲೇ ಇಳಿಸಿದ್ದರಿಂದ ಹಾಗೂ ಕಂಡಕ್ಟರ್ ಸರಿಯಾದ ಸಮಯಕ್ಕೆ ಬ್ರೇಕ್ ಒತ್ತಿ ಬಸ್ ನಿಲ್ಲಿಸಿದ್ದರಿಂದಾಗಿ ಭಾರಿ ಅನಾಹುತ ಆಗುವಂಥದ್ದು ತಪ್ಪಿದಂತಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಫಜಲಪುರ ಡಿಪೋ ಅಧಿಕಾರಿ-ಸಿಬ್ಬಂದಿ ಸೂಕ್ತ ಕ್ರಮಕೈಗೊಂಡಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net