ರಾಜ್ಯಕ್ಕೆ ಮಾನ್ಸೂನ್ ಆಗಮನ ಯಾವಾಗ?; ಇಲ್ಲಿದೆ ಹವಾಮಾನ ಇಲಾಖೆ ಮಾಹಿತಿ

Monsoon
Published on

ಬೆಂಗಳೂರು: ಈ ಬಾರಿ ನೈಋತ್ಯ ಮಾನ್ಸೂನ್ (ಮುಂಗಾರು ಮಳೆ) ರಾಜ್ಯಕ್ಕೆ ಯಾವಾಗ ಪ್ರವೇಶಿಸಲಿದೆ ಎಂಬ ಕುರಿತು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾನ್ಸೂನ್​ ಜೂ. 6 ಅಥವಾ ಜೂ. 7ರಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ವಾಡಿಕೆಯಂತೆ ಜೂ. 1 ಅಥವಾ ಜೂ. 2ರಂದು ಕೇರಳಕ್ಕೆ ಆಗಮಿಸುವ ಮಾರುತಗಳು ಮೂರ್ನಾಲ್ಕು ದಿನಗಳ ಬಳಿಕ ಕರ್ನಾಟಕಕ್ಕೆ ಪ್ರವೇಶಿಸುತ್ತವೆ. ಆದರೆ, ಮುಂಗಾರು ಪೂರ್ವದಲ್ಲಿ ಉಂಟಾಗಿದ್ದ ತೇವಾಂಶ ಕೊರತೆ, ಗಾಳಿ ವೇಗ ಇಲ್ಲದಿರುವುದು ಹಾಗೂ ಮೋಕಾ ಚಂಡಮಾರುತವೂ ತೇವಾಂಶ ಭರಿತ ಮೋಡಗಳನ್ನು ಸೆಳೆದಿದ್ದೂ ಸೇರಿ ಇತರೆ ಕಾರಣಗಳಿಂದ ವಾಡಿಕೆಯಂತೆ ಆಗಮನವಾಗಬೇಕಿದ್ದ ಮಾರುತಗಳು ಮೇಲೆ ಪರಿಣಾಮ ಬೀರಿದೆ.

ಸೋಮವಾರ ಬಂಗಾಳಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಮುಂಗಾರು ಸಂಬಂಧ ಪೂರಕ ಹವಾಗುಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಜೂ. 4 ಅಥವಾ ಜೂ. 5ರಂದು ಕೇರಳಕ್ಕೆ ಮಾರುತಗಳು ಪ್ರವೇಶಿಸಲಿವೆ. ಒಂದು ವೇಳೆ ಮಾರುತಗಳು ಪ್ರಬಲವಾದರೆ ಒಂದೆರೆಡು ದಿನಗಳಲ್ಲಿ ಕರ್ನಾಟಕಕ್ಕೆ ಆಗಮಿಸಲಿವೆ.

ಮಳೆ ಚುರುಕು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮುಂದಿನ ಐದು ದಿನ ಗುಡುಗು ಮಿಂಚು ಸಹಿತ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಸೋಮವಾರ ಬೆಂಗಳೂರು ನಗರ, ರಾಮನಗರ, ಹಾವೇರಿ ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಜೋರಾಗಿ ಮಳೆ ಸುರಿದಿದೆ.

ಹಾಸನ,ಕೊಡಗು, ಚಿಕ್ಕಮಗಳೂರಿನಲ್ಲಿ ಮೇ 31ರಂದು, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ ಹಾಗೂ ತುಮಕೂರಿನಲ್ಲಿ ಜೂ 1ರಂದು ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ.

ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮೈಸೂರು, ಶಿವಮೊಗ್ಗ ಮತ್ತು ವಿಜಯನಗರದಲ್ಲಿ ಮುಂದಿನ 3 ದಿನ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net