

ಮೀರತ್: ನಾಲ್ಕು ಮಂದಿ ಖದೀಮರು 15 ಅಡಿ ಸುರಂಗ ಕೊರೆದು ಚಿನ್ನದಂಗಡಿ ದೋಚಲು ವಿಫಲ ಪ್ರಯತ್ನ ನಡೆಸಿದ್ದಾರೆ. ಕೊನೆಗೆ ಗೋಡೆಯ ಮೇಲೆ ನಮ್ಮನ್ನ ಕ್ಷಮಿಸಿ ಎಂದು ಬರೆದಿಟ್ಟು ಪರಾರಿಯಾಗಿರುವಂತಹ ವಿಚಿತ್ರ ಘಟನೆ ಮೀರತ್ನಲ್ಲಿ ನಡೆದಿದೆ.
ದೀಪಕ್ ಎಂಬಾತನ ಮಾಲೀಕತ್ವದ ಆಭರಣ ಮಳಿಗೆಯಲ್ಲಿ ಖದೀಮರು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಮಾಲೀಕ ದೀಪಕ್ ಎಂದಿನಂತೆ ಬೆಳಗ್ಗೆ ಬಂದು ಅಂಗಡಿಯ ಶಟರ್ ತೆರೆದಾಗ ಆಳವಾದ ರಂಧ್ರ ಕಂಡು ಬಂದಿದೆ. ಗಾಬರಿಗೊಂಡು ಪರಿಶೀಲಿಸಿದಾಗ ಹೊರಭಾಗದ ಚರಂಡಿಯಿಂದ ಸುರಂಗವೊಂದನ್ನು ನೇರವಾಗಿ ಅಂಗಡಿಯ ಒಳಭಾಗಕ್ಕೆ ಕೊರೆದಿರುವುದು ಕಂಡು ಬಂದಿದೆ.
ಕಳ್ಳರು ತಮ್ಮ ಗುರುತು ಸಿಗಬಾರದೆಂದು ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿದ್ದಾರೆ. ಒಳಪ್ರವೇಶಿಸಲು ಅಂಗಡಿಯ ಕಮಾನು ಒಡೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಹೀಗಾಗಿ ಗೋಡೆಯ ಮೇಲೆ ಕ್ಷಮಿಸಿ ಎಂದು ಬರೆದು ಪರಾರಿಯಾಗಿದ್ದಾರೆ. ಈ ಬಗ್ಗೆ ಅಂಗಡಿ ಮಾಲೀಕ ದೀಪಕ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸಿದ್ದಾರೆ.
ಪೊಲೀಸರ ಪರಿಶೀಲಿಸಿದಾಗ ಅಂಗಡಿಯಲ್ಲಿ ಇರಿಸಲಾಗಿದ್ದ ಕೃಷ್ಣನ ವಿಗ್ರಹದಿಂದ ಬೆಳ್ಳಿಯ ಕೊಳಲನ್ನು ಕದ್ದೊಯ್ದಿರುವುದು ಗೊತ್ತಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಪ್ಪೊಪ್ಪಿಕೊಂಡು ತಲೆಮರೆಸಿಕೊಂಡಿರುವ ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್)