

ಉತ್ತರ ಕನ್ನಡ: ಜೋಯ್ಡಾದಲ್ಲಿ ಸಿನಿಮಾ ಚಿತ್ರೀಕರಣಕ್ಕೆಂದು ಬಂದ 20 ಕೋಟಿ ರೂ. ಬೆಲೆ ಬಾಳುವ ಶ್ವಾನವನ್ನು, ಕಾಡು ಪ್ರಾಣಿ ಎಂದು ಗೊಂದಲಕ್ಕೊಳಗಾಗಿ ಅರಣ್ಯ ಸಿಬ್ಬಂದಿ ತಪಾಸಣೆ ಮಾಡಿರುವಂತಹ ಘಟನೆ ನಡೆದಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕ ನಟನಾಗಿ ನಟಿಸುತ್ತಿರುವ ಗೌರಿಶಂಕರ ಸಿನಿಮಾ ಚಿತ್ರೀಕರಣಕ್ಕೆಂದು ಬೆಂಗಳೂರಿನಿಂದ ಈ ನಾಯಿಯನ್ನು ಕರೆತರಲಾಗಿತ್ತು. ಈ ವೇಳೆ ದಾಂಡೇಲಿಯಲ್ಲಿ ಗೊಂದಲಗೊಂಡ ಅರಣ್ಯ ಸಿಬ್ಬಂದಿಗಳು ಶ್ವಾನವನ್ನು ತಪಾಸಣೆ ನಡೆಸಿದ್ದಾರೆ.
ಈ ಶ್ವಾನ ಟಿಬೆಟಿಯನ್ ಮಸ್ತಫ್ ಜಾತಿಗೆ ಸೇರಿದೆ. ಅರಣ್ಯ ಅಧಿಕಾರಿಗಳು ಶ್ವಾನವನ್ನು ಕಾಡು ಪ್ರಾಣಿಯೆಂದು ವಶಕ್ಕೆ ಪಡೆಯಲು ಮುಂದಾದಾಗ, ಶ್ವಾನದ ಮಾಲೀಕ ಸತೀಶ್ ಕ್ಯಾಡಬಮ್ಸ್ ಅರಣ್ಯ ಇಲಾಖೆಗೆ ತಿಳುವಳಿಕೆ ನೀಡಿದ್ದಾರೆ. ಇದು ಶ್ವಾನ, ತೋಳ ಅಥವಾ ಇನ್ಯಾವುದೇ ಕಾಡುಪ್ರಾಣಿ ಅಲ್ಲ ಎಂದು ಮನವರಿಕೆ ಮಾಡಿದ್ದಾರೆ.
20 ಕೋಟಿ ಬೆಲೆಬಾಳುವ ಹೈದರ್ ಹೆಸರಿನ ಈ ಶ್ವಾನಕ್ಕೆ ತಂಗಲು ಹವಾ ನಿಯಂತ್ರಿತ ಕೊಠಡಿ ವ್ಯವಸ್ಥೆ ಮಾಡಲಾಗಿದೆ. 15 ದಿನಗಳ ಕಾಲ ರವಿಚಂದ್ರನ್ ಅಭಿನಯದ ಗೌರಿಶಂಕರ ಸಿನಿಮಾ ಚಿತ್ರಿಕರಣ ನಡೆಯಲಿದೆ.