

ಮುಂಬೈ: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕದನ ವಿರಾಮ ಘೊಷಣೆಯಾದ ಬೆನ್ನಲ್ಲೇ ಭಾರತೀಯ ಷೇರು ಪೇಟೆ ಸೋಮವಾರ ಶೇ. 4ರಷ್ಟು ಏರಿಕೆಯಾಗಿ ಒಂದೇ ದಿನದಲ್ಲಿ ಅತಿ ದೊಡ್ಡ ಲಾಭವನ್ನು ದಾಖಲಿಸಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ 3,041 ಅಂಕ ಹೆಚ್ಚಳವಾಗಿ 82,495ಕ್ಕೆ ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 2,975 ಅಂಕಗಳಷ್ಟು ಏರಿಕೆ (ಶೇ. 3.74) ದಾಖಲಿಸಿ 82,429ಕ್ಕೆ ಸ್ಥಿರಗೊಂಡಿತು.
ಇದು ಕಳೆದ ಏಳು ತಿಂಗಳಲ್ಲೇ ಗರಿಷ್ಠ ಮಟ್ಟವಾಗಿದೆ. ನಿಫ್ಟಿ ಕೂಡ ಒಂದು ಹಂತದಲ್ಲಿ 936 ಅಂಕ ಹೆಚ್ಚಳ (ಶೇ. 3.90) ಆಗಿ 24,944ಕ್ಕೆ ತಲುಪಿತ್ತು. ವಹಿವಾಟಿನ ಕೊನೆಗೆ 916 ಅಂಕ ಏರಿಕೆ ದಾಖಲಿಸಿ 24,924ಕ್ಕೆ ಸ್ಥಿರವಾಯಿತು. ಈ ಹಿಂದೆ 2024ರ ಜೂನ್ 3ರಂದು ಸೆನ್ಸೆಕ್ಸ್ 2,507 ಅಂಕ ಮತ್ತು ನಿಫ್ಟಿ 733 ಅಂಕ ಏರಿಕೆಯಾಗಿದ್ದೇ ಏಕದಿನದ ಗರಿಷ್ಠ ಹೆಚ್ಚಳವಾಗಿತ್ತು. ಸೋಮವಾರದ ಏರಿಕೆಯಿಂದಾಗಿ ಭಾರತೀಯ ಹೂಡಿಕೆದಾರರ ಸಂಪತ್ತು 16.15 ಲಕ್ಷ ಕೋಟಿ ರೂ.ನಷ್ಟು ಹೆಚ್ಚಳವಾಗಿದೆ.
ಅಮೆರಿಕ ಮತ್ತು ಚೀನಾ ಭಾನುವಾರ ತಮ್ಮ ನಡುವಿನ ಭಾರೀ ಪ್ರಮಾಣದ ತೆರಿಗೆಗಳನ್ನು 90 ದಿನಗಳ ಕಾಲ ತಡೆಹಿಡಿದಿದ್ದು ಕೂಡ ಭಾರತೀಯ ಷೇರುಪೇಟೆಯ ಏರಿಕೆಗೆ ಕಾರಣವಾಗಿದೆ. ಜಿನೀವಾದಲ್ಲಿ ನಡೆದ ಮಾತುಕತೆ ವೇಳೆ ಅಮೆರಿಕ ತಾನು ವಿಧಿಸಿದ್ದ ಶೇ. 145 ತೆರಿಗೆಯನ್ನು ಶೇ. 30ಕ್ಕೆ ಇಳಿಸಲು ಮತ್ತು ಚೀನಾ ತಾನು ವಿಧಿಸಿದ್ದ ಶೇ. 125 ತೆರಿಗೆಯನ್ನು ಶೇ. 10ಕ್ಕೆ ಇಳಿಸಲು ತೀರ್ವನಿಸಿದ್ದವು. ಸೆನ್ಸೆಕ್ಸ್ ಷೇರುಗಳ ಪೈಕಿ ಇನ್ಫೋಸಿಸ್ ಸೋಮವಾರ ಶೇ. 7.91ರಷ್ಟು ಏರಿಕೆಯಾಗಿದ್ದು ಗಮನಾರ್ಹ. ಉಳಿದಂತೆ ಎಚ್ಸಿಎಲ್ ಟೆಕ್, ಟಾಟಾ ಸ್ಟೀಲ್, ಎಟರ್ನಲ್, ಟೆಕ್ ಮಹಿಂದ್ರಾ, ಟಿಸಿಎಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎನ್ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ ಷೇರುಗಳೂ ಲಾಭ ಗಳಿಸಿದವು.
ಸನ್ ಫಾರ್ವ, ಇಂಡಸ್ಇಂಡ್ ಬ್ಯಾಂಕ್ ಷೇರುಗಳು ನಷ್ಟಕ್ಕೀಡಾದವು. ಇದೇ ವೇಳೆ ಪಾಕಿಸ್ತಾನದ ಕೆಎಸ್ಇ-100 ಸೂಚ್ಯಂಕ ಶೇ. 9ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾ, ಜಪಾನ್, ಶಾಂಘೈ ಮತ್ತು ಹಾಂಗ್ಕಾಂಗ್ ಸೂಚ್ಯಂಕಗಳೂ ಏರಿಕೆ ದಾಖಲಿಸಿವೆ.