

IPL 2025: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ 18ನೇ ಆವೃತ್ತಿ ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನತೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಎರಡು ದೇಶಗಳ ನಡುವ ಯುದ್ಧ ಭೀತಿ ಸೃಷ್ಟಿಯಾದ ಹಿನ್ನೆಲೆ ಐಪಿಎಲ್ ಪಂದ್ಯಗಳನ್ನು ಮುಂದೂಡಲಾಯಿತು. ಈ ವಿಷಯ ತಿಳಿಯುತ್ತಿದ್ದಂತೆ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ಬಿಟ್ಟು ತಮ್ಮ ದೇಶಕ್ಕೆ ವಾಪಾಸ್ ಆದ ವಿದೇಶಿ ಕ್ರಿಕೆಟಿಗರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ, ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ ಐಪಿಎಲ್ 2025ಕ್ಕೆ ಮರಳುವುದು ಬಹುತೇಕ ಅನುಮಾನ ಎಂದು ಹೇಳಲಾಗಿದ್ದು, ಮತ್ತೊಂದೆಡೆ ಆರ್ಸಿಬಿ ಪರ ಅದ್ಭುತ ಬೌಲಿಂಗ್ ಕಮಾಲ್ ಮಾಡಿದ್ದ ಜೋಶ್ ಹೆಜೆಲ್ವುಡ್ ಕೂಡ ಐಪಿಎಲ್ ಪುನಾರಂಭಕ್ಕೆ ಮರಳುವುದಿಲ್ಲ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡಿವೆ. ಸ್ಟಾರ್ ಆಟಗಾರರ ಈ ದಿಢೀರ್ ನಿರ್ಧಾರಗಳು ಆರ್ಸಿಬಿ ಮತ್ತು ಡಿಸಿ ಫ್ಯಾನ್ಸ್ಗಳನ್ನು ಕೆರಳಿಸಿದೆ.
ಇದೇ ಮೇ.16ರಿಂದ ಬಾಕಿ ಉಳಿದಿರುವ ಐಪಿಎಲ್ ಪಂದ್ಯಗಳು ಪುನರಾರಂಭಗೊಳ್ಳಲಿದೆ ಎಂದು ವರದಿಗಳು ಸೂಚಿಸಿವೆ. ಹೀಗಿರುವಾಗಲೇ ಐಪಿಎಲ್ನಿಂದ ಹೊರಹೋಗಿರುವ ಮಿಚೆಲ್ ಸ್ಟಾರ್ಕ್ ಈಗಾಗಲೇ ಸಿಡ್ನಿಗೆ ತೆರಳಿದ್ದಾರೆ. ಐಪಿಎಲ್ಗೆ ಮರಳುವ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಲು ಹಿಂದೇಟು ಹಾಕಿದ ಸ್ಟಾರ್ಕ್, ತಮ್ಮ ಮ್ಯಾನೇಜರ್ ಕಡೆಯಿಂದ ಅನುಪಸ್ಥಿತಿ ಬಗ್ಗೆ ಮಾಹಿತಿ ರವಾನಿಸಿದ್ದಾರೆ.
ಅದೇ ರೀತಿ, ಸನ್ರೈಸರ್ಸ್ ಹೈದರಾಬಾದ್ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್ ಮತ್ತು ಟ್ರಾವಿಸ್ ಹೆಡ್ ಕೂಡ ಡಬ್ಲ್ಯೂಟಿಸಿ ನೆಪದಲ್ಲಿ ತಮ್ಮ ದೇಶಕ್ಕೆ ವಾಪಾಸ್ ಆಗಬಹುದು ಎಂದು ಹೇಳಲಾಗಿದೆ. ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಇದೇ ಜೂನ್ 11ರಂದು ಲಾರ್ಡ್ಸ್ನಲ್ಲಿ ನಡೆಯಲಿರುವ ಮುಂಬರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಫೈನಲ್ ಮೇಲೆ ಹೆಚ್ಚು ಗಮನಹರಿಸಿದ್ದಾರೆ. ಈ ಹಿನ್ನೆಲೆ ಐಪಿಎಲ್ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಪ್ಯಾಟ್ ಕಮ್ಮಿನ್ಸ್, ಜೋಶ್ ಹೆಜಲ್ವುಡ್, ಮಿಚೆಲ್ ಸ್ಟಾರ್ಕ್ ಸೇರಿದಂತೆ ಐಪಿಎಲ್ನ ಅರ್ಧಕ್ಕೆ ಬಿಟ್ಟು ಹೋಗುವ ವಿದೇಶಿ ಆಟಗಾರರನ್ನು ಎರಡು ವರ್ಷಗಳ ಕಾಲ ಐಪಿಎಲ್ನಿಂದ ಬ್ಯಾನ್ ಮಾಡಿ ಎಂಬ ಕೂಗು ನೆಟ್ಟಿಗರಿಂದ ಕೇಳಿಬಂದಿವೆ,(ಏಜೆನ್ಸೀಸ್).