

ಸೊರಬ: ಗುಡಿ ಗೋಪುರಗಳನ್ನು ಚಿಕ್ಕದಾಗಿ ಮಾಡಿ, ಶಾಲೆಗಳನ್ನು ದೊಡ್ಡದಾಗಿ ಕಟ್ಟಿಸಿದಾಗ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಕುಬಟೂರು ಗ್ರಾಮದಲ್ಲಿ ಸೋಮವಾರ ಬನ್ನಿಮುಡಿ ಕರಿಯಮ್ಮ ದೇವಾಲಯದ ಬಳಿ ಸಮುದಾಯ ಭವನಕ್ಕೆ ಭೂಮಿಪೂಜೆ, ಚಲವಾದಿ ಕೇರಿಗೆ ಕುಡಿಯುವ ನೀರು ಪೂರೈಕೆಗೆ ಚಾಲನೆ ಹಾಗೂ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ಗ್ರಾಮದ ಜನ ನನಗೆ ಹೆಚ್ಚಿನ ಮತ ನೀಡಿ ಸಹಕರಿಸಿದ್ದಾರೆ. ಆ ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ. ಈ ಬಾರಿ ಆಯ್ಕೆ ಮಾಡಿ ಸಚಿವರನ್ನಾಗಿ ಮಾಡಿದ್ದೀರಿ. ಈ ಋಣವನ್ನು ಮರೆತಿಲ್ಲ, ಮರೆಯುವುದೂ ಇಲ್ಲ. ಯಾರನ್ನೂ ದ್ವೇಷ ಮಾಡದೆ, ಜಾತಿ, ಮತ ತಾರತಮ್ಯ ಮಾಡದೆ ಕೆಲಸ ಮಾಡುತ್ತೇನೆ ಎಂದರು.
ನಮ್ಮ ಮಕ್ಕಳು ಓದಿದ ಹಾಗೆ ಗ್ರಾಮದ ಮಕ್ಕಳು ಓದಲಿ ಎಂದು ಬಂಗಾರಪ್ಪ ಅವರು ಓದಿದ ಶಾಲೆಗೆ 10 ಲಕ್ಷ ರೂ. ದೇಣಿಗೆ ನೀಡಿ ಶಾಲೆ ಅಭಿವೃದ್ಧಿಪಡಿಸಿದ್ದೇವೆ. ನಮ್ಮ ಗ್ರಾಮದ ಮಕ್ಕಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರಸ್ತೆ, ಕುಡಿಯುವ ನೀರು, ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು.
ಅಧಿಕಾರ ಎಷ್ಟು ದಿನ ಇರುತ್ತದೆ ಎಂಬುದು ಮುಖ್ಯವಲ್ಲ. ಅಗತ್ಯವಿರುವ ಸೌಲಭ್ಯಗಳನ್ನು ಪಡೆಯಲು ಅಂಜಿಕೆ ಇಲ್ಲದೆ ಕೇಳಬೇಕು. ತಾಲೂಕಿಗೆ ಶರಾವತಿ ನದಿಯಿಂದ ನೀರು ತರಲು ಯೋಜನೆ ಸಿದ್ಧಪಡಿಸಲಾಗಿದೆ. ಇನ್ನೊಂದೆರಡು ವರ್ಷದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಲಿದೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನ ಈಡೇರಿಸಿದೆ. ಹಾಗೆಯೇ ಇವುಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಷಣ್ಮುಖಪ್ಪ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ತಾಪಂ ಮಾಜಿ ಉಪಾಧ್ಯಕ್ಷ ಸುರೇಶ ಹಾವಣ್ಣನವರ, ಬಗರ್‌ಹುಕುಂ ಸಮಿತಿ ಸದಸ್ಯ ಎಂ.ಡಿ.ಶೇಖರ್, ಪ್ರಮುಖರಾದ ಅಂಜಲಿ, ಮಂಜಣ್ಣ, ಮಂಜುನಾಥ್, ರವೀಂದ್ರನಾಥ್ ನಾಯಕ್, ಗುಡ್ಡಪ್ಪ ಮಾಸ್ತರ್, ನಿಂಗಪ್ಪ ಮಾಸ್ತರ್, ಶ್ರೀಕಾಂತ, ಸುಮತೇಂದ್ರ, ವಿಶಾಲಾಕ್ಷಿ, ಮಧು ಗೌಡ, ಸೋಮಣ್ಣ, ಸುರೇಶ್, ಆನವಟ್ಟಿ ಪಪಂ ಮುಖ್ಯಾಧಿಕಾರಿ ಸಂತೋಷ್ ಇತರರಿದ್ದರು.