ಕೆರೆಗಳನ್ನು ಕಟ್ಟುವುದು ಪುಣ್ಯದ ಕೆಲಸ

18ss1udgatane
Published on

ಶನಿವಾರಸಂತೆ: ಕೆರೆಗಳನ್ನು ಕಟ್ಟುವುದು ಮತ್ತು ಕೆರೆ ಜೀರ್ಣೋದ್ಧಾರ ಮಾಡುವುದು ಪುಣ್ಯದ ಕೆಲಸ ಎಂದು ಮಾಜಿ ಸಚಿವ ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಬಳಿಯ ನಂದಿಪುರ ಗ್ರಾಮದ ನಂದಿನೇಸರ ಉದ್ಯಾನದಲ್ಲಿ ತಲಕಾವೇರಿ ತೀರ್ಥೋದ್ಭವ ಪ್ರಯುಕ್ತ ಹಮ್ಮಿಕೊಂಡಿದ್ದ ನಂದಿಪುರ ಕೆರೆಗೆ ಗಂಗಾರತಿ ಮತ್ತು ಬಾಗಿನ ಸಮರ್ಪಣಾ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಕೆರೆ ಜೀರ್ಣೋದ್ಧಾರ ಪುಣ್ಯ ಕಾರ್ಯದ ಜತೆಯಲ್ಲಿ ನೀರು ಸಂಗ್ರಹವಾಗುತ್ತದೆ. ಇದರಿಂದ ಅಂತರ್ಜಲ ಹೆಚ್ಚಾಗಿ ಜೀವಜಲ ಉಳಿಯುತ್ತದೆ ಎಂದರು. ಈ ಹಿಂದೆ ನನ್ನ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 138 ಕೆರೆಗೆ ನೀರುಣಿಸುವ ಕಾರ್ಯ ಮಾಡಿದ್ದೆ. ಈ ಮೂಲಕ ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ಇದೆ ಎಂಬುದನ್ನು ರಾಜ್ಯಕ್ಕೆ ತೋರಿಸುವಷ್ಟು ಕಾರ್ಯಕ್ರಮಗಳನ್ನು ನನ್ನ ಅವಧಿಯಲ್ಲಿ ಮಾಡಲು ಸಾಧ್ಯವಾಯಿತು. ರಾಜಕಾರಣ ಶ್ರೇಷ್ಠ ಅಲ್ಲ. ಸಾಧನೆ ಮಾಡಲು ಬೇಕಾದಷ್ಟು ವೇದಿಕೆ ಇದೆ. ನಾನು ಸಚಿವನಾಗಿದ್ದ ಅವಧಿಯಲ್ಲಿ ಜಿಲ್ಲೆ ಸೇರಿದಂತೆ ರಾಜ್ಯಕ್ಕೆ ನೀರಾವರಿ ಕಾಮಗಾರಿ ಮಾಡಲು ನೂರಾರು ಕೋಟಿ ರೂ.ಅನುದಾನ ಕೊಟ್ಟಿದ್ದೆ ಎಂದು ಹೇಳಿದರು.

ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳಲು ಕೆರೆ ಜೀರ್ಣೋದ್ಧಾರ ಕಾರ್ಯಕ್ರಮಗಳ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸುಂದರವಾದ ಕೆರೆ ನಿರ್ಮಾಣ ಮಾಡಲಾಗಿದೆ ಎಂದರು. ತಲಕಾವೇರಿಯಲ್ಲಿ ತೀರ್ಥೋದ್ಬವಗೊಂಡ ಸಮಯದಲ್ಲಿ ನಂದಿಪುರ ಕೆರೆಗೆ ಸ್ವಾಮೀಜಿಗಳು, ಮಹಿಳೆಯರು ಸೇರಿಕೊಂಡು ಗಂಗಾರತಿ ಮತ್ತು ಬಾಗಿನ ಸಮರ್ಪಿಸಿರುವುದು ಪುಣ್ಯದ ಕಾರ್ಯವಾಗಿದೆ ಎಂದರು.

ಅರಕಲಗೂಡು ಅರೆಮಾದನಹಳ್ಳಿ ವಿಶ್ವಕರ್ಮ ಜಗತ್‌ಗುರು ಪೀಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕೇಂದ್ರಗಳ ಬಗ್ಗೆ ಪ್ರತಿಯೊಬ್ಬರಲ್ಲಿ ಗೌರವ ಭಾವನೆ ಬೆಳೆಸಿಕೊಳ್ಳಬೇಕು. ಧಾರ್ಮಿಕ ಕೇಂದ್ರಗಳು ಸಮಾಜದ ಸುಸ್ಥಿತಿಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಗುರುವಿನ ಸ್ಥಾನ ದೊಡ್ಡದು, ಶರಣರು ಸಹ ಗುರುಗಳ ಬಗ್ಗೆ ಅತ್ಯಂತ ಭಯಭಕ್ತಿ ಗೌರವ ಹೊಂದಿದ್ದರು ಎಂದರು.

ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ಬೆಂಗಳೂರಿನ ಮಾದರಿಯಲ್ಲಿ ಕೆರೆ ಉದ್ಯಾನಗಳನ್ನು ನಿರ್ಮಾಣ ಮಾಡಿರುವಂತೆ ನಮ್ಮೂರಿನ ನಂದಿಪುರ ಕೆರೆ ಉದ್ಯಾನ ನಿರ್ಮಾಣ ಮಾಡುವ ಉದ್ದೇಶದಿಂದ ಹಿಂದಿನ ಅವಧಿಯಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದ ಮಾಧುಸ್ವಾಮಿ ಮತ್ತು ಆಗ ಮಡಿಕೇರಿ ಶಾಸಕರಾಗಿದ್ದ ಅಪ್ಪಚ್ಚುರಂಜನ್ ಅವರ ಸಹಕಾರದಿಂದ ಮತ್ತು ಈಗಿನ ಅವಧಿಯ ಉಸ್ತುವಾರಿ ಸಚಿವ ಬೋಸರಾಜು ಮತ್ತು ಶಾಸಕ ಡಾ.ಮಂತರ್ ಗೌಡ ಸಹಕಾರದಿಂದ 3 ಕೋಟಿ ರೂ. ಅನುದಾನದಲ್ಲಿ ನಮ್ಮೂರಿನ ಕೆರೆಯನ್ನು ಅಭಿವೃದ್ಧಿ ಪಡಿಸಿ ಸುಂದರ ಉದ್ಯಾನವನ ನಿರ್ಮಿಸಲಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಕೆರೆ ಉದ್ಯಾನವನ ನಿರ್ಮಾಣಕ್ಕೆ ಕಾರಣರಾದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಮಾಜಿ ಸಚಿವ ಮಾಧುಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮತ್ತು ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಎ.ಎಚ್.ಸಾಗರ್, ಶ್ರೀ ಮಹಾಂತ ಸ್ವಾಮಿ, ಶ್ರೀ ರುದ್ರಮುನಿಸ್ವಾಮಿ, ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮಿ, ಮಹಾಂತಶಿವಲಿಂಗ ಸ್ವಾಮಿ, ಸಂಗಮೇಶ್, ಪ್ರೇಮ್‌ನಾಥ್, ಅರಣ ಚಂದ್ರಮೌಳಿ, ಎಸ್.ಕೆ.ಮೂರ್ತಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net