ಜನರಲ್ಲಿ ವಿಶ್ವಾಸ ಮೂಡಿಸಿ; ಸಿಎಎ ಬಗ್ಗೆ ಅನಗತ್ಯ ಗೊಂದಲ ಬೇಡ

CAA Protest
Published on

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತಾಗಿ ಈಗ ಚರ್ಚೆ ಗರಿಗೆದರಿದೆ. ಬರಲಿರುವ ಲೋಕಸಭೆ ಚುನಾವಣೆಗೆ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ದೇಶಾದ್ಯಂತ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಸಜ್ಜಾಗಿರುವ ಬೆನ್ನಲ್ಲೇ, ಈ ಕುರಿತು ಅನಗತ್ಯ ಆತಂಕ ಸೃಷ್ಟಿಸುವ ಪ್ರಯತ್ನಗಳು ಹೆಚ್ಚುತ್ತಿವೆ. ಮುಖ್ಯವಾಗಿ, ಅಲ್ಪಸಂಖ್ಯಾತ ಸಮುದಾಯವನ್ನು ಪ್ರಚೋದಿಸುವ ಕೆಲಸ ಕೆಲ ರಾಜಕಾರಣಿಗಳಿಂದ ನಡೆಯುತ್ತಿರುವುದು ದುರದೃಷ್ಟಕರ. ‘ಕಾನೂನಿನ ನಿಯಮಗಳು ಸಿದ್ಧಗೊಳ್ಳುತ್ತಿದ್ದಂತೆಯೇ ಸಿಎಎ ಜಾರಿ ಮಾಡಲಾಗುವುದು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಕಿರುಕುಳ ಎದುರಿಸಿ ಭಾರತಕ್ಕೆ ವಲಸೆ ಬಂದ ಜನರಿಗೆ ಪೌರತ್ವ ನೀಡುವುದಷ್ಟೇ ಸಿಎಎ ಮುಖ್ಯ ಉದ್ದೇಶವಾಗಿದೆ. ಭಾರತದಲ್ಲಿರುವ ಯಾರ ಪೌರತ್ವವನ್ನೂ ಈ ಕಾನೂನು ಕಿತ್ತುಕೊಳ್ಳುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಸ್ಪಷ್ಟಮಾತುಗಳಲ್ಲಿ ತಿಳಿಸಿದ್ದಾರೆ.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 31ರ ಒಳಗಾಗಿ ಭಾರತಕ್ಕೆ ಬಂದ ಹಿಂದು, ಸಿಖ್, ಜೈನ, ಬೌದ್ಧರು, ಪಾರ್ಸಿ ಮತ್ತು ಕ್ರಿಶ್ಚಿಯನ್ನರಿಗೆ ಸಿಎಎ ಕಾನೂನಿನಡಿ ಭಾರತದ ಪೌರತ್ವ ಸಿಗಲಿದೆ. ಇದರಲ್ಲಿ ಗೊಂದಲ ಸೃಷ್ಟಿಸುವ ಅಂಶವೇ ಇಲ್ಲ. ಆದರೂ, ಅಲ್ಪಸಂಖ್ಯಾತರಲ್ಲಿ ಸಿಎಎ ಬಗ್ಗೆ ತಪು್ಪಭಾವನೆ ಮೂಡಿಸುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆ. ಇದು ವಿರೋಧಕ್ಕಾಗಿ ವಿರೋಧ ಎಂಬ ಭಾವನೆಯನ್ನು ತೋರುತ್ತಿದೆ. ರಾಜಕೀಯ ಪಕ್ಷಗಳು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕೆ ಹೊರತು ದಿಕ್ಕುತಪ್ಪಿಸುವ ಕೃತ್ಯಗಳಿಗೆ ಕೈಹಾಕಬಾರದು.

ಏತನ್ಮಧ್ಯೆ, ಕಳೆದೆರಡು ವರ್ಷಗಳಲ್ಲಿ ದೇಶದ 9 ರಾಜ್ಯಗಳ 30ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳು ಮತ್ತು ಗೃಹ ಕಾರ್ಯದರ್ಶಿಗಳಿಗೆ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ದೇಶದ ಪೌರತ್ವ ನೀಡುವ ಅಧಿಕಾರ ನೀಡಲಾಗಿದೆ ಎಂಬುದು ಗಮನಾರ್ಹ. ಸಿಎಎ ಜಾರಿ ಮೂಲಕ ಯಾರನ್ನೂ ದೇಶದಿಂದ ಹೊರಹಾಕುವ ಉದ್ದೇಶ ಇಲ್ಲ ಎಂಬುದು ಸ್ಪಷ್ಟವಾಗಿದ್ದರೂ, ಈ ಬಗ್ಗೆ ಮತ್ತೊಮ್ಮೆ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕಿದೆ. ಇತರ ಪಕ್ಷಗಳು ಈ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು.

‘ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಹಿಂಪಡೆದರೆ ಇಡೀ ದೇಶ ಹೊತ್ತಿ ಉರಿಯುತ್ತದೆ’ ಎಂದು ಆ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಬಹಿರಂಗವಾಗಿ ಹೇಳಿ, ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡಿದ್ದರು. ಆದರೆ, ವಿಶೇಷ ಸ್ಥಾನಮಾನ (ಕಲಂ 370) ಹಿಂಪಡೆದಿದ್ದನ್ನು ಜಮ್ಮು-ಕಾಶ್ಮೀರದ ಜನ ಮುಕ್ತವಾಗಿ ಸ್ವಾಗತಿಸಿದರಲ್ಲದೆ, ಆ ಪ್ರದೇಶ ಈಗ ಅಭಿವೃದ್ಧಿಗೆ ತೆರೆದುಕೊಂಡಿರುವ ನಿದರ್ಶನ ಎಲ್ಲರ ಕಣ್ಣ ಮುಂದಿದೆ.

ಹಾಗಾಗಿ, ರಾಷ್ಟ್ರದ ಮೇಲೆ ಪರಿಣಾಮ ಬೀರುವ ಗಂಭೀರ ಸಂಗತಿಗಳ ಕುರಿತು ಯಾವುದೇ ಪಕ್ಷವಾಗಲಿ ರಾಜಕೀಯ ಮಾಡಬಾರದು. ಇತ್ತೀಚಿನ ದಿನಗಳಲ್ಲಿ ಈ ದುರದೃಷ್ಟಕರ ಬೆಳವಣಿಗೆ ಹೆಚ್ಚುತ್ತಿದ್ದು, ಎಲ್ಲ ವಿಷಯಗಳನ್ನು ರಾಜಕೀಯಕರಣಗೊಳಿಸಲಾಗುತ್ತಿದೆ. ಇದರಿಂದ ಆಡಳಿತ ಪಕ್ಷ ಅಥವಾ ಪ್ರತಿಪಕ್ಷಗಳು ಮತಬ್ಯಾಂಕ್​ಗಳನ್ನು ಗೆಲ್ಲಬಹುದು ಎಂದು ಭಾವಿಸುತ್ತವೆಯಾದರೂ, ವಾಸ್ತವ ಹಾಗಿಲ್ಲ. ಅನಗತ್ಯ ರಾಜಕೀಯ ವಿವಾದ, ತೀವ್ರ ಬಗೆಯ ಆರೋಪ-ಪ್ರತ್ಯಾರೋಪದ ಘಟನೆಗಳು ಜನರನ್ನು ಗೊಂದಲದಲ್ಲಿ ಮುಳುಗಿಸುತ್ತವೆ. ಅಲ್ಲದೆ, ಒಂದು ಬಗೆಯ ಭೀತಿಯನ್ನೂ ಸೃಷ್ಟಿಸುತ್ತವೆ. ಅಷ್ಟಕ್ಕೂ, ವಾಸ್ತವವನ್ನು ಅರಿಯುವ, ನೈಜ ಮಾಹಿತಿಗಳ ಆಧಾರದ ಮೇಲೆ ವಿವೇಚನಾಯುಕ್ತ ತೀರ್ಮಾನ ಕೈಗೊಳ್ಳುವ ಹಕ್ಕು ಜನಸಾಮಾನ್ಯರಿಗೆ ಇದೆ ಎಂಬುದನ್ನು ರಾಜಕೀಯ ಪಕ್ಷಗಳು ಮರೆಯುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net