

ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಆಯವ್ಯಯವನ್ನು ಪ್ರಸ್ತುತಪಡಿಸಿ ದ್ದಾರೆ. ಇದು ಅವರ 15ನೇ ಬಜೆಟ್. ಕರ್ನಾಟಕದ ಇತಿಹಾಸದಲ್ಲಿ ಇಷ್ಟು ಬಾರಿ ಯಾರೂ ಬಜೆಟ್ ಮಂಡಿಸಿಲ್ಲ. ಸಿದ್ದರಾಮಯ್ಯ ಅವರ ಅನುಭವದ ಛಾಪು ಬಜೆಟ್ನಲ್ಲಿ ಕಾಣಿಸಿದೆ.
ತಮ್ಮ ನೀತಿಗಳಿಗೆ ಸಿದ್ದರಾಮಯ್ಯ ತೋರಿರುವ ಬದ್ಧತೆ, ಆರ್ಥಿಕ ಇತಿಮಿತಿಯಲ್ಲಿ ಹಣಕಾಸು ಹಂಚಿಕೆ ಗಮನಾರ್ಹ. ರಾಜಸ್ವ ಕೊರತೆ, ವಿತ್ತೀಯ ಕೊರತೆ ಒಪ್ಪಿಕೊಳ್ಳುತ್ತಲೇ ಕರ್ನಾಟಕದ ವಿತ್ತೀಯ ಹೊಣೆಗಾರಿಕೆ ಅಧಿನಿಯಮ ನಿಗದಿಪಡಿಸಿರುವ ಮಿತಿಯೊಳಗೆ ಅಂದಾಜು ಮಾಡುವ ಮೂಲಕ ಶಿಸ್ತನ್ನು ಪಾಲಿಸಿರುವುದು ಅವರ ಅನುಭವಕ್ಕೆ ಸಾಕ್ಷಿ. ಐದು ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಮೀಸಲಿಡುವ ಮೂಲಕ ‘ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ’ ಎಂಬ ಸ್ಪಷ್ಟ ಸಂದೇಶವನ್ನೂ ಅವರು ಕಳಿಸಿದ್ದಾರೆ.
ರಾಜ್ಯದಲ್ಲಿ ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಮಾಧ್ಯಮ ಶಾಲೆಗಳನ್ನು ತೆರೆಯುವ ಪ್ರಸ್ತಾಪ ಈ ಬಜೆಟ್ನ ವಿಶೇಷ ಮತ್ತು ಶ್ಲಾಘನಾರ್ಹ ಉಪಕ್ರಮ. ಇಂಗ್ಲಿಷ್ ಭಾಷೆಯನ್ನು ಗ್ರಾಮೀಣ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಕಲಿಯುವುದರಿಂದ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು, ಉನ್ನತ, ವೃತ್ತಿಪರ ಶಿಕ್ಷಣದಲ್ಲಿ ಇತರ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಸರಿಸಮನಾಗಿ ನಿಲ್ಲುವುದು ಸಾಧ್ಯವಾಗುತ್ತದೆ.
ರೈತ ಸಮೃದ್ಧಿ, ನಮ್ಮ ಮಿಲ್ಲೆಟ್, ಕಿಸಾನ್ ಮಾಲ್, ವಿಮಾನ ನಿಲ್ದಾಣ ಬಳಿ ಆಹಾರ ಪಾರ್ಕ್, ಸ್ಪೈಸ್ ಪಾರ್ಕ್, ದತ್ತಾಂಶ ಅಭಿವೃದ್ಧಿಯಂತ ಕ್ರಮಗಳು ಕೃಷಿ- ತೋಟಗಾರಿಕೆ ಕ್ಷೇತ್ರದ ಬೆಳವಣಿಗೆಗೆ ಚೇತೋಹಾರಿಯಾಗಿವೆ. ಸಮಾಜ ಕಲ್ಯಾಣ, ಶಿಕ್ಷಣ ಕ್ಷೇತ್ರಕ್ಕೆ ಸಾಮಾನ್ಯ ಘೋಷಣೆಗಳಷ್ಟೆ ಎನಿಸುವಂತಿದೆ. ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು, ಪ್ರಯೋಗಾಲಯ, ನವೀನ ಉಪಕರಣ ಬಳಕೆಗೆ ಮಾಡಿರುವ ಪ್ರಯತ್ನ ಸಮಾಧಾನಕರ ಎನ್ನಬಹುದು. ವಸತಿ ವಿಚಾರಕ್ಕೆ ಬಂದರೆ ಗುರಿ ದೊಡ್ಡದಿದೆ, ಬಡವರಿಗೆ ಮನೆ ಕೊಡುವ ಭರವಸೆ ಅನುಷ್ಠಾನವಾಗಬೇಕಷ್ಟೆ. 80 ದಾಟಿದ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಆಹಾರ ಧಾನ್ಯ ತಲುಪಿಸುವ ಅನ್ನ ಸುವಿಧಾ, ಗಿಗ್ ವರ್ಕರ್ಗಳಿಗೆ ಕಲ್ಯಾಣ ಕಾರ್ಯಕ್ರಮ ರೂಪಿಸುವ ಪ್ರಯತ್ನ, ಕೌಶಲ್ಯಯುತ ಮಾನವ ಸಂಪನ್ಮೂಲ ಸೃಷ್ಟಿಗಾಗಿನ ಹತ್ತಾರು ಕಾರ್ಯಕ್ರಮ ಮೆಚ್ಚುವಂಥದ್ದು. ರಸ್ತೆ ಅಭಿವೃದ್ಧಿಗೆಂದು ಹಣ ತೋರಿಸಿರುವುದು ಸಮಾಧಾನಕರ ವಿಚಾರ. ಬೃಹತ್ ನೀರಾವರಿ ಯೋಜನೆಗಳ ಬಗ್ಗೆ ಭರವಸೆ ಇದೆಯೇ ಹೊರತು ಅನುದಾನ ಕಾಣಿಸಿಲ್ಲ. ಆಸ್ತಿ ರಚನೆಗೆ ಒತ್ತು ನೀಡದಿರುವುದು ಒಳ್ಳೆಯ ಬೆಳವಣಿಗೆಯಲ್ಲ.
ರಾಜ್ಯದ ಒಟ್ಟು ಹೊಣೆಗಾರಿಕೆ ಕಳವಳಕಾರಿ ಸಂಗತಿಯೂ ಹೌದು. ಹಾಸಿಗೆ ಇದ್ದಷ್ಟು ಕಾಲು ಚಾಚೆಂಬುದು ನಾಣ್ಣುಡಿ, ಆದರೆ ಇಲ್ಲಿ ಹಾಸಿಗೆ ಮೀರಿ ಕಾಲುಚಾಚಿ ಹಾಸಿಗೆಯನ್ನೇ ವಿಸ್ತರಿಸಿದರೆ ಹೇಗೆ ಎಂಬ ಚಿಂತನೆ ಹರಿಬಿಟ್ಟಂತಿದೆ. ಕಳೆದ ವರ್ಷಕ್ಕಿಂತ ಸುಮಾರು 25 ಸಾವಿರ ಕೋಟಿ ರೂ. ಹೆಚ್ಚುವರಿ ಸಾಲ ಮಾಡಿ ಅದರಲ್ಲಿ ಅಭಿವೃದ್ಧಿಗೆ ಕೇವಲ 1 ಸಾವಿರ ಕೋಟಿ ಮಾತ್ರ ಬಳಸಿಕೊಳ್ಳುವ ಪ್ರಸ್ತಾಪ, ಪ್ರತಿ ಕನ್ನಡಿಗನ ಮೇಲೆ ಸಾಲ 28 ಸಾವಿರ ರೂ. ಮುಟ್ಟಿರುವುದು ಒಳ್ಳೆಯ ಬೆಳವಣಿಯಲ್ಲ.
ಕೇಂದ್ರ ಸರ್ಕಾರವನ್ನು ರಾಜಕೀಯ ಕಾರಣಕ್ಕೆ ಟೀಕಿಸಲು ಆಯವ್ಯಯವನ್ನು ವೇದಿಕೆಯಾಗಿ ಬಳಸಿಕೊಳ್ಳುವುದು ಔಚಿತ್ಯಪೂರ್ಣವಲ್ಲ. ರಾಜಕೀಯ ಕಾಲಚಕ್ರ ತಿರುಗುತ್ತಲೇ ಇರುತ್ತದೆ, ಮುಂದೊಂದು ದಿನ ಇದು ತಿರುಗುಬಾಣವಾಗಬಹುದು.