3 ಲಕ್ಷ ಕೋಟಿ ರೂ. ಸಂಪತ್ತು ವೃದ್ಧಿ; ಷೇರುಪೇಟೆಯಲ್ಲಿ ಸಂಚಲನ ತಂದ ಬಜೆಟ್ ಭರವಸೆ

Sensex
Published on

ಮುಂಬೈ: ಕೇಂದ್ರ ಸರ್ಕಾರದ 2022-23ನೇ ಸಾಲಿನ ಬಜೆಟ್ ಮೂಡಿಸಿದ ಭರವಸೆಯ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಸಂಚಲನ ಉಂಟಾಗಿದ್ದು, 848 ಅಂಶ ಏರಿಕೆ ಕಂಡಿದೆ. ಈ ಮೂಲಕ ಹೂಡಿಕೆದಾರರ ಆಸ್ತಿ ಸುಮಾರು 3 ಲಕ್ಷ ಕೋಟಿ ರೂಪಾಯಿ ಹಿಗ್ಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಂತೆ, ಲೋಹ, ಮೂಲಸೌಕರ್ಯಕ್ಕೆ ಸಂಬಂಧಿಸಿದ ವಲಯಗಳ ಷೇರುಗಳ ಖರೀದಿ ಭರಾಟೆಯಿಂದ ನಡೆಯಿತು.

30 ಪ್ರಮುಖ ವಲಯದ ಸೆನ್ಸೆಕ್ಸ್ ನಲ್ಲಿ 848.40 (ಶೇ. 1.46) ಅಂಶ ಹೆಚ್ಚಳವಾಗಿ 59,032.20ಕ್ಕೆ ಮಂಗಳವಾರದ ವಹಿವಾಟು ಕೊನೆಗೊಂಡಿತು. ನಿಫ್ಟಿಯಲ್ಲಿ 237 (ಶೇ. 1.37) ಪಾಯಿಂಟ್ ಏರಿಕೆಯಾಗಿ 17,576.85ಕ್ಕೆ ವಹಿವಾಟು ಮುಕ್ತಾಯವಾಯಿತು. ಟಾಟಾ ಸ್ಟೀಲ್ ಷೇರು ಮೌಲ್ಯ ಶೇ. 7.57 ಏರಿಕೆ ಕಂಡರೆ, ಸನ್ ಫಾರ್ವ, ಇಂಡಸ್​ಇಂಡ್ ಬ್ಯಾಂಕ್, ಎಲ್ ಆಂಡ್ ಟಿ, ಅಲ್ಟ್ರಾ ಸಿಮೆಂಟ್, ಐಟಿಸಿ, ಎಚ್​ಸಿಎಲ್ ಟೆಕ್​ಗಳು ಲಾಭ ದಾಖಲಿಸಿದವು. ಮತ್ತೊಂದೆಡೆ, ಎಂ ಆಂಡ್ ಎಂ, ಪವರ್ ಗ್ರಿಡ್, ಎಸ್​ಬಿಐ, ಭಾರ್ತಿ ಏರ್​ಟೆಲ್, ಎನ್​ಟಿಪಿಸಿ, ಮಾರುತಿ, ರಿಲಯನ್ಸ್ ಕಂಪನಿಗಳು ನಷ್ಟ ಅನುಭವಿಸಿವೆ.

ಚಿನ್ನದ ದರ ಹೆಚ್ಚಳ: ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ಬೆಲೆ 333 ರೂ. ಏರಿಕೆಯಾಗಿದ್ದು, 10 ಗ್ರಾಂನ ದರ 47,844 ರೂ.ಗೆ ತಲುಪಿದೆ. ಬೆಳ್ಳಿ ಧಾರಣೆ 68 ರೂ. ಇಳಿಕೆಯಾಗಿದ್ದು, ಕೆ.ಜಿ. ಬೆಲೆ 61,164 ರೂ.ಗೆ ತಗ್ಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net