

BTech student : ಈಗಿರುವ ಶಿಕ್ಷಣ ವ್ಯವಸ್ಥೆಯಲ್ಲಿನ ತಮ್ಮ ಹೋರಾಟದ ಬಗ್ಗೆ ಸುದೀರ್ಘ ಪತ್ರವೊಂದನ್ನು ಬರೆದು ಬಿಹಾರ ಮೂಲದ 24 ವರ್ಷದ ಬಿಟೆಕ್ ವಿದ್ಯಾರ್ಥಿಯೊಬ್ಬರು ತನ್ನ ಹಾಸ್ಟೆಲ್ ರೂಮಿನಲ್ಲಿ ಸಾವಿಗೆ ಶರಣಾಗಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಶಿವಂ ಎಂದು ಗುರುತಿಸಲಾಗಿದೆ. ಗ್ರೇಟರ್ ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗೆ ದಾಖಲಾಗಿದ್ದರು. ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಶಿವಂ, ಅಲ್ಲಿನ ಶಿಕ್ಷಣ ವ್ಯವಸ್ಥೆಯೊಂದಿಗಿನ ತಮ್ಮ ಹೋರಾಟಗಳ ಬಗ್ಗೆ ಬರೆದ ಪತ್ರದ ಬರೆದು ಹಾಸ್ಟೆಲ್ ಕೋಣೆಯಲ್ಲಿ ಸಾವನ್ನಪ್ಪಿದ್ದಾರೆ. ಆಗಸ್ಟ್ 15ರ ರಾತ್ರಿ ಅವರ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀವು ಈ ಪತ್ರವನ್ನು ಓದುವಷ್ಟರಲ್ಲಿ ನಾನು ಸತ್ತಿರುತ್ತೇನೆ. ನನ್ನ ಸಾವು ನನ್ನ ಸ್ವಂತ ನಿರ್ಧಾರವಾಗಿದ್ದು, ಇದರಲ್ಲಿ ಯಾರೂ ಭಾಗಿಯಾಗಿಲ್ಲ. ನಾನು ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ ಅಥವಾ ಬಹುಶಃ ಈ ಶಿಕ್ಷಣ ವ್ಯವಸ್ಥೆಗೆ ನಾನು ಎಂದಿಗೂ ಸರಿ ಇರಲಿಲ್ಲ. ಈ ದೇಶವು ಶ್ರೇಷ್ಠವಾಗಬೇಕೆಂದು ಬಯಸಿದರೆ, ನಿಜವಾದ ಶಿಕ್ಷಣ ವ್ಯವಸ್ಥೆಯಿಂದ ಪ್ರಾರಂಭಿಸಿ ಎಂದಿರುವ ಶಿವಂ, ಎರಡನೇ ವರ್ಷದ ನಂತರ ನಾನು ಕಾಲೇಜಿಗೆ ದಾಖಲಾಗದ ಕಾರಣ ನನ್ನ ಕುಟುಂಬಕ್ಕೆ "ಬಳಕೆಯಾಗದ" ಶುಲ್ಕವನ್ನು ಮರುಪಾವತಿಸಿ ಎಂದು ವಿಶ್ವವಿದ್ಯಾಲಯವನ್ನು ಕೋರಿದ್ದಾರೆ.
ಶಿವಂ ತನ್ನ ಹೆತ್ತವರಲ್ಲಿ ಕ್ಷಮೆಯಾಚಿಸಿದ್ದು, ಕಳೆದ ಒಂದು ವರ್ಷದಿಂದ ಆತ್ಮಹತ್ಯೆ ಬಗ್ಗೆ ನಾನು ಯೋಚಿಸುತ್ತಿದ್ದೆ. ಈ ಒತ್ತಡವನ್ನು ನಾನಿನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಈ ನಿರ್ಧಾರಕ್ಕೆ ಬಂದೆ. ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಎಂದಿರುವ ಶಿವಂ, ತಮ್ಮ ಅಂಗಾಂಗಗಳನ್ನು ದಾನ ಮಾಡುವ ಇಚ್ಛೆಯನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 15ರ ರಾತ್ರಿ, ವಿದ್ಯಾರ್ಥಿಯ ಆತ್ಮಹತ್ಯೆಯ ಬಗ್ಗೆ ಆಸ್ಪತ್ರೆಯಿಂದ ನಮಗೆ ಜ್ಞಾಪಕ ಪತ್ರ ಬಂತು. ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿ, ಕುಟುಂಬಕ್ಕೆ ಮಾಹಿತಿ ನೀಡಿದರು. ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿ ಒತ್ತಡಕ್ಕೊಳಗಾಗಿದ್ದ ಎಂದು ತಿಳಿದುಬಂದಿದೆ. ಆತ ಹಲವಾರು ಪತ್ರಿಕೆಗಳಲ್ಲಿ ಅನುತ್ತೀರ್ಣನಾಗಿದ್ದ ಮತ್ತು ಕಳೆದ ಎರಡು ವರ್ಷಗಳಿಂದ ಕಾಲೇಜಿಗೆ ಹೋಗಿಲ್ಲ ಎಂದು ತಿಳಿದುಬಂದಿದೆ. ಡೆತ್ನೋಟ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ತನ್ನ ಸಾವಿಗೆ ತಾನೇ ಕಾರಣ, ಯಾರಿಗೂ ಕಿರುಕುಳ ನೀಡಬೇಡಿ ಎಂದು ಪೊಲೀಸರನ್ನು ಕೇಳಿಕೊಂಡಿದ್ದಾನೆ. ಆದರೆ, ನಾವು ನಮ್ಮ ಕಡೆಯಿಂದ ಏನು ತನಿಖೆ ನಡೆಯಬೇಕೋ ಅದನ್ನು ಮುಂದುವರಿಸುತ್ತೇವೆ ಎಂದು ಗ್ರೇಟರ್ ನೋಯ್ಡಾದ ಎಡಿಸಿಪಿ ಸುಧೀರ್ ಕುಮಾರ್ ಹೇಳಿದ್ದಾರೆ.
ಅಂದಹಾಗೆ, ಶಿವಂ ಅವರ ಕುಟುಂಬ ಬಿಹಾರದ ಮಧುಬನಿ ಜಿಲ್ಲೆಯಲ್ಲಿದೆ. ಅವರ ಕುಟುಂಬ ಶುಕ್ರವಾರ ಸಂಜೆ ಶಿವಂ ಅವರೊಂದಿಗೆ ಕೊನೆಯ ಬಾರಿಗೆ ಮಾತನಾಡಿದೆ. ಸಂಜೆ 5.30 ರಿಂದ 6.00 ರ ಸುಮಾರಿಗೆ ಕರೆ ಮಾಡಿ ಎಲ್ಲರ ಯೋಗಕ್ಷೇಮವನ್ನು ವಿಚಾರಿಸಿದನು. ನಾನು ಆತನ ಆರೋಗ್ಯದ ಬಗ್ಗೆ ಕೇಳಿದೆ ಮತ್ತು ಕಾಳಜಿ ವಹಿಸಲು ಹೇಳಿದೆ ಎಂದು ಶಿವಂ ಅವರ ತಾಯಿ ಸುದ್ದಿ ಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.
ನನ್ನ ಮಗ 2022 ರಿಂದ ಇಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗೆ ದಾಖಲಾಗಿದ್ದಾನೆ. ನಿನ್ನೆ ಸಂಜೆ 7.30 ರಿಂದ 8.00ರ ಸುಮಾರಿಗೆ ವಿಶ್ವವಿದ್ಯಾಲಯದಿಂದ ನನಗೆ ಕರೆ ಬಂತು. ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದರು. ಆ ಮಾತು ಕೇಳಿ ನಮ್ಮ ಹೃದಯವೇ ಒಡೆದು ಹೋಯಿತು. ನಾನು ಆತನ ಕೊನೆಯ ಚಟುವಟಿಕೆಯ ಬಗ್ಗೆ ಮತ್ತು ಆತನು ಏಕೆ ಈ ರೀತಿ ಮಾಡಿದನೆಂದು ಕೇಳಿದೆ. ನಿಮ್ಮ ಮಗ ಆತ್ಮಹತ್ಯೆ ಪತ್ರವನ್ನು ಬರೆದಿದ್ದಾನೆ ಮತ್ತು ಅದು ಪೊಲೀಸರ ಬಳಿ ಇದೆ ಎಂದು ಹೇಳಿದರು ಅಂತ ಶಿವಂ ಅವರ ತಂದೆ ಕಾರ್ತಿಕ್ ಹೇಳಿದರು.
ಇನ್ನು ಮೃತ ಶಿವಂ ಅವರ ಪಾಲಕರು ವಿಶ್ವವಿದ್ಯಾನಿಲಯದ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಒಂದು ಮಗು ಒಂದು ವರ್ಷಕ್ಕೂ ಹೆಚ್ಚು ಕಾಲ ಖಿನ್ನತೆಗೆ ಒಳಗಾಗಿತ್ತು ಮತ್ತು ತರಗತಿಗಳಿಗೆ ಹಾಜರಾಗುತ್ತಿರಲಿಲ್ಲ. ಈ ಬಗ್ಗೆ ಗೊತ್ತಾದ ನಂತ ಕಾಲೇಜು ಅಧಿಕಾರಿಗಳು ಪಾಲಕರಿಗೆ ಮಾಹಿತಿ ನೀಡಬಹುದಿತ್ತಲ್ವಾ? ಇದು ಕಾಲೇಜಿನ ಜವಾಬ್ದಾರಿ ಎಂದು ಶಿವಂ ಅವರ ತಾಯಿ ಕಣ್ಣೀರು ಹಾಕಿದರು. ಸದ್ಯ ಈ ಸಂಬಂಧ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)