

Lucky Man : ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಕೇರಳ ಮೂಲದ ಆಟೋ ಚಾಲಕನ ಬಾಳಲ್ಲಿ ಬಹಳ ವರ್ಷಗಳ ಹಿಂದೆಯೇ ನಡೆದಿದ್ದು, ಬದುಕೇ ಬದಲಾಗಿದೆ.
ಹೌದು, ತಿರುವನಂತಪುರಂನ ಶ್ರೀಕಂಠೇಶ್ವರಂ ಮೂಲದ ಅನೂಪ್ ಓರ್ವ ಸಾಮಾನ್ಯ ಆಟೋ ಚಾಲಕನಾಗಿದ್ದ. ಹೀಗಿರುವಾಗ 2022ರಲ್ಲಿ ಓಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ರೂಪಾಯಿಗಳ ಮೊದಲ ಬಹುಮಾನ ಗೆದ್ದರು. ಅಂದಿನಿಂದ ಅನೂಪ್ ಬದುಕೇ ಬದಲಾಗಿದೆ. ಅಲ್ಲದೆ, ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.
ಅನೂಪ್ ಯಾವಾಗ ಲಾಟರಿ ಗೆದ್ದರೋ ಆಗ ಅವರ ಬಳಿ ಸಹಾಯ ಕೇಳುವ ಮಂದಿ ಹೆಚ್ಚಾಗಿದ್ದಾರು. ಅಲ್ಲದೆ, 25 ಕೋಟಿ ಹಣದಲ್ಲಿ ತನಗೆ ಸಿಕ್ಕ ಹಣ ಮತ್ತು ಸದ್ಯ ಅವರೇನು ಮಾಡುತ್ತಿದ್ದಾರೆ ಎಂಬುದನ್ನು ಇತ್ತೀಚಿನ ಯೂಟ್ಯೂಬ್ ಸಂದರ್ಶನದಲ್ಲಿ ಅನೂಪ್ ಹಂಚಿಕೊಂಡಿದ್ದಾರೆ.
ಅಂದು ಬಹುಮಾನವಾಗಿ ಬಂದ 25 ಕೋಟಿ ರೂ.ನಲ್ಲಿ ತನಗೆ ಸಿಕ್ಕಿದ್ದು ಅರ್ಧದಷ್ಟು ಹಣ ಮಾತ್ರ ಎಂದಿದ್ದಾರೆ. ರಾಜ್ಯ ಲಾಟರಿ ಇಲಾಖೆಯಿಂದ 15 ಕೋಟಿ ರೂ. ಮಾತ್ರ ಪಡೆದೆ. ಉಳಿದ ಹಣ ಕೇಂದ್ರ ಮತ್ತು ರಾಜ್ಯದ ತೆರಿಗೆಯಾಗಿ ಕಡಿತ ಮಾಡಲಾಯಿತು ಎಂದರು.
ಅಂದು ನಾನು ಗೆದ್ದ ಹಣದಿಂದ ಇಂದಿಗೂ ಏನನ್ನೂ ಮಾಡಿಲ್ಲ ಬದಲಾಗಿ ಅದರಿಂದ ಬರುತ್ತಿರುವ ಬಡ್ಡಿಯ ಹಣದ ಮೇಲೆ ನನ್ನ ಕೆಲಸಗಳನ್ನು ಮಾಡುತ್ತಿದ್ದೇನೆ. ಪ್ರಸ್ತುತ ಒಂದು ವ್ಯವಹಾರನ್ನು ಪ್ರಾರಂಭಿಸಿದ್ದೇನೆ ಮತ್ತು ಆ ಮೊತ್ತದಿಂದ ಪಡೆದ ಬಡ್ಡಿಯಲ್ಲಿ ಬೇರೊಬ್ಬರು ನಿರ್ಮಿಸಿದ ಹಳೆಯ ಮನೆಯನ್ನು ಖರೀದಿಸಿದ್ದೇನೆ. ನನಗೆ ಯಾವಾಗಲೂ BMW ಕಾರು ಖರೀದಿಸಬೇಕೆಂದು ಆಸೆ ಇದೆ. ಪ್ರಸ್ತುತ ನನ್ನ ಬಳಿ ಹಣವಿದ್ದರೂ ಅದನ್ನು ಖರೀದಿಸಿಲ್ಲ ಎಂದು ಅನೂಪ್ ತಿಳಿಸಿದರು.
25 ಕೋಟಿ ರೂ. ಗೆದ್ದ ನಂತರ ಹೋಟೆಲ್ ಆರಂಭಿಸುವುದು ನನ್ನ ಗುರಿ ಎಂದು ಅನೂಪ್ ಹೇಳಿದ್ದರು. ಇತ್ತೀಚೆಗೆ ಕೈತಮುಕ್ಕುವಿನಲ್ಲಿ 'ಹ್ಯಾಪಿ' ಎಂಬ ಹೋಟೆಲ್ ತೆರೆದಿದ್ದಾರೆ. ಇದಕ್ಕೂ ಮೊದಲು ಅವರು ಮಣಕಾಡ್‌ನಲ್ಲಿ ಲಾಟರಿ ವ್ಯವಹಾರ ನಡೆಸುತ್ತಿದ್ದರು. ಆದರೆ, ಅನೂಪ್ ಅವರ ಸಮಯದ ಕೊರತೆಯಿಂದಾಗಿ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಇಂದಿಗೂ ಸಹ, ಅನೂಪ್ ಲಾಟರಿ ಆಡುತ್ತಾರೆ. ಅಲ್ಲದೆ, ನಿತ್ಯವೂ ಸಾಕಷ್ಟು ಮಂದಿ ನನ್ನ ಬಳಿ ಸಹಾಯ ಕೋರುತ್ತಿದ್ದಾರೆ ಎಂದು ಅನೂಪ್ ಹೇಳಿದರು. ಸಾಕಷ್ಟು ಫೋನ್ ಕರೆಗಳು ಕೂಡ ಬರುತ್ತಿವೆ. ಅವರೆಲ್ಲ ನನಗೆ ಹಣದ ಸಹಾಯ ಮಾಡಿ ಎಂದು ಗೋಳಿಡುತ್ತಾರೆ ಎಂದು ಅನೂಪ್ ತಿಳಿಸಿದ್ದಾರೆ. (ಏಜೆನ್ಸೀಸ್)