10 ಕೆಜಿ ಅಕ್ಕಿಯಲ್ಲಿ ಒಂದು ಗ್ರಾಂ ಕಡಿಮೆಯಾದರೂ ಜನರು ಒಪ್ಪುವುದಿಲ್ಲ : ಬಿಎಸ್​​ವೈ

bsy
Published on

ಶಿವಮೊಗ್ಗ: ಕಾಂಗ್ರೆಸ್ ಗ್ಯಾರಂಟಿಯಲ್ಲಿ ಒಂದಾಗಿರುವ ಪ್ರತಿ ಕುಟುಂಬಕ್ಕೆ 10‌ ಕೆಜಿ ಅಕ್ಕಿ ವಿತರಣೆ ಮಾಡಬೇಕು. 10 ಕೆಜಿಯಲ್ಲಿ ಒಂದು ಗ್ರಾಂ ಕಡಿಮೆಯಾದರೂ ಜನರು ಒಪ್ಪುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸುಖಾಸುಮ್ಮನೆ ಗೊಂದಲ ಉಂಟು ಮಾಡುತ್ತಿದೆ. ಅಕ್ಕಿ ವಿತರಣೆ ವಿಚಾರದಲ್ಲಿ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತಿದೆ. ಹೆಚ್ಚುವರಿಯಾಗಿ ಅಕ್ಕಿ ಕೊಡಲಿಕ್ಕೆ ಕೇಂದ್ರ ಒಪ್ಪಿರಲಿಲ್ಲ. ಅದು ರಾಜ್ಯ ಸರ್ಕಾರದ ಜವಾಬ್ದಾರಿ. ಎಲ್ಲಿಯಾದರೂ ಖರೀದಿ ಮಾಡಿ ಕೊಡಬೇಕು ಎಂದರು.

ಕಾಂಗ್ರೆಸ್ ನಾಯಕರು 10 ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ನುಡಿದಂತೆ ನಡೆಯಬೇಕು. ಒಂದು ಗ್ರಾಂ ಕಡಿಮೆಯಾದರೂ ಜನ ಅದನ್ನು ಒಪ್ಪುವುದಿಲ್ಲ. ಅವರು ಕೊಟ್ಟ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರವನ್ನು ಅನಗತ್ಯ ದೂಷಣೆ ಮಾಡುವುದು ಸರಿಯಲ್ಲ. ಯಾವುದೇ ಸಮಯದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚುವರಿ ಅಕ್ಕಿ ಕೊಡುತ್ತೇವೆ ಎಂದು ಹೇಳಿಲ್ಲ. ಈಗ ಕೊಡುತ್ತಿರುವುದು ಕೂಡ ಕೇಂದ್ರ. ಅದು ಉಚಿತವಾಗಿ. ಆದರೆ, ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿನಾಃ ಕಾರಣ ಗೊಂದಲ ಉಂಟು ಮಾಡುತ್ತಿದ್ದಾರೆ. ಎಲ್ಲಿಯಾದರೂ ತಂದು ಗೊಂದಲ ಮಾಡದೇ ಅಕ್ಕಿ ವಿತರಣೆ ಮಾಡಬೇಕು ಎಂದರು.

ವಿಪಕ್ಷ ಆಯ್ಕೆ ವಿಚಾರದ ಕುರಿತು ಮಾತನಾಡಿದ ಯಡಿಯೂರಪ್ಪ, ಸದನ ಆರಂಭವಾಗುವುದರೊಳಗೆ ವಿಪಕ್ಷ ನಾಯಕನ ಆಯ್ಕೆ ಮಾಡುತ್ತೇವೆ. ಅದರಲ್ಲಿ ಏನು ವಿಶೇಷ ಇಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net