

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಕಾಂಗ್ರೆಸ್ ಹೆಣೆದಿರುವ ‘ಆಪರೇಷನ್ ಹಸ್ತ’ ತಂತ್ರಗಾರಿಕೆ ವಿಫಲಗೊಳಿಸಿ, ಬಿಜೆಪಿ ಬಲಿಷ್ಠವಾಗಿದೆ ಎಂದು ಸಾರಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವ್ಯೂಹಾತ್ಮಕ ಹೆಜ್ಜೆಯಿಟ್ಟಿದ್ದಾರೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು, ಉತ್ಸಾಹ ತುಂಬಲು ಸೆ. 16ರಿಂದ ರಾಜ್ಯ ಪ್ರವಾಸ, ಜನರ ಪರವಾಗಿ ಹೋರಾಟಕ್ಕೆ ಇಳಿಯಲು ಮುಂದಾಗಿದ್ದಾರೆ. ಅದಕ್ಕೂ ಮುನ್ನ ಪಕ್ಷದ ಆಂತರಿಕ ಸಮಸ್ಯೆ ನಿವಾರಣೆ, ಮುಖಂಡರ ಮುನಿಸು ಶಮನಕ್ಕೆ ಆದ್ಯತೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಿಷನ್-25ರ ಗುರಿ ಸಾಧನೆಗೆ ಪೂರಕವಾದ ಸಿದ್ಧತೆಗೆ ಗಮನ ಹರಿಸಿದ್ದಾರೆ.
ಮಾಜಿ ಮಂತ್ರಿ ಎಸ್.ಟಿ. ಸೋಮಶೇಖರ್ರನ್ನು ಕರೆದು ಮಾತುಕತೆ ನಡೆಸಿ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸಲಹೆ ನೀಡಿದ್ದಾರೆ. ಇದೀಗ ಮತ್ತಿಬ್ಬರು ಅತೃಪ್ತರ ಮನವೊಲಿಕೆಗಾಗಿ ನೇರ ಕಾರ್ಯಾಚರಣೆಗೆ ಬಿಎಸ್ವೈ ಮುಂದಾಗಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲನಿಯ ‘ಧವಳಗಿರಿ’ ಖಾಸಗಿ ನಿವಾಸದಲ್ಲಿ ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ ಮತ್ತು ಎಂ.ಪಿ. ರೇಣುಕಾಚಾರ್ಯ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್ ಬಿಂಬಿಸಿ, ಒಂದಿಷ್ಟು ಉತ್ತಮ ಫಸಲು ಪಡೆದುಕೊಂಡಿದೆ. ಲೋಕಸಭೆ ಚುನಾವಣೆಯಲ್ಲೂ ಇದೇ ಅಸ್ತ್ರ ಪ್ರಯೋಗಿಸುವ ಉತ್ಸಾಹದಲ್ಲಿದೆ. ಕೈ ಪಕ್ಷದ ನಾಯಕರ ಮಾತಿಗೆ ಬಿಜಿಪಿಯಲ್ಲಿನ ಸಮುದಾಯದ ಕೆಲ ಮುಖಂಡರು ಧ್ವನಿಗೂಡಿಸಿದ್ದಾರೆ. ಈ ಬೆಳವಣಿಗೆಯನ್ನು ಹಗುರವಾಗಿ ಪರಿಗಣಿಸಿದರೆ ಮತ್ತೆ ಪೆಟ್ಟು ಬೀಳಲಿದೆ. ಲಿಂಗಾಯತರಿಗೆ ಬಿಜೆಪಿ ಹೆಚ್ಚಿನ ಅವಕಾಶ ಕೊಟ್ಟಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ತದ್ವಿರುದ್ಧವಾಗಿ ನಡೆದುಕೊಂಡಿದೆ. ವಾಸ್ತವಾಂಶ ಪರಿಣಾಮಕಾರಿಯಾಗಿ ಬಿಂಬಿಸಬೇಕು. ಪಕ್ಷದೊಳಗಿನ ಸಮುದಾಯದ ನಾಯಕರ ಅನಗತ್ಯ ಅಪಸ್ವರದಿಂದ ಉಂಟಾಗುವ ‘ಹಾನಿ ನಿಯಂತ್ರಣ’ಕ್ಕೆ ಕ್ರಮವಹಿಸಬೇಕು.
ಲೋಕಸಭೆ ಚುನಾವಣೆ ಬಂದಿರುವ ಕಾರಣ ಯಡಿಯೂರಪ್ಪ ಅವರನ್ನು ಮತ್ತೆ ಮುಂದೆ ಬಿಟ್ಟಿದ್ದು, ನಂತರ ಮೂಲೆಗುಂಪು ಮಾಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುವುದನ್ನು ತಪ್ಪಿಸುವ ಅಗತ್ಯವಿದೆ. ಇದಕ್ಕಾಗಿ ಹಿರಿಯ ನಾಯಕರು ಒಟ್ಟಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಒಗ್ಗಟ್ಟಿನ ಬಲದಿಂದ ಕಾಂಗ್ರೆಸ್ನ ಕಾರ್ಯತಂತ್ರ ನೆಲಕಚ್ಚಿಸಲು ಸಾಧ್ಯವಿದೆ ಎಂಬ ವಿಚಾರ ಮಾತುಕತೆ ವೇಳೆ ಪ್ರಸ್ತಾಪವಾಗಿದೆ. ಕ್ಷೇತ್ರದ ಮಟ್ಟಿಗೆ ಪ್ರಭಾವಿಗಳು, ಹಿರಿಯರು ಒಬ್ಬೊಬ್ಬರಾಗಿ ಪಕ್ಷ ತೊರೆದರೆ ತಪು್ಪ ಸಂದೇಶ ಹೋಗಲಿದ್ದು, ಬದಲಿ ಯೋಚನೆ ಮಾಡಿರುವ ಉಳಿದ ನಾಯಕರನ್ನು ಕರೆದು ರ್ಚಚಿಸಿ ಸಮಸ್ಯೆ ಬಗೆಹರಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವದಂತಿ ಹಬ್ಬಿಸಿ ವ್ಯವಸ್ಥಿತವಾಗಿ ಪಕ್ಷ ಬಿಟ್ಟು ಹೋಗುವಂತಹ ಸನ್ನಿವೇಶ, ಸಂದರ್ಭವನ್ನು ಆಂತರಿಕವಾಗಿ ಸೃಷ್ಟಿಯಾಗುತ್ತಿದ್ದು, ಈ ಬೆಳವಣಿಗೆ ಬಗ್ಗೆಯೂ ಆತಂಕ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಮುನೇನಕೊಪ್ಪ ಹಾಗೂ ರೇಣುಕಾಚಾರ್ಯ ಜತೆಗೆ ಬಿಎಸ್ವೈ ಪ್ರತ್ಯೇಕವಾಗಿ ಅರ್ಧ ತಾಸು ರ್ಚಚಿಸಿದ್ದಾರೆ. ನಂತರ ‘ಧವಳಗಿರಿ’ಗೆ ಆಗಮಿಸಿದ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅವರೂ ಮಾತುಕತೆ ನಡೆಸಿದರು.
ಕಾಂಗ್ರೆಸ್ನಿಂದ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಬಿಜೆಪಿಯಲ್ಲಿ ಲಿಂಗಾಯತರ ಕಡೆಗಣನೆ ಯಾಗಿಲ್ಲ. ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಯಡಿಯೂರಪ್ಪ ಅವರಿಗೆ ಸ್ಪಷ್ಟಪಡಿಸಿರುವೆ. | ಶಂಕರ ಪಾಟೀಲ್ ಮುನೇನಕೊಪ್ಪ, ಮಾಜಿ ಸಚಿವ ನಾನು ಯಾವುದೇ ತಪ್ಪು ಮಾಡಿಲ್ಲ. ನೋಟಿಸ್ಗೆ ಉತ್ತರಿಸಿದರೆ ಖಳನಾಯಕ ನಾಗುವೆ. ಬೇಷರತ್ತಾಗಿ ಈ ನೋಟಿಸ್ ವಾಪಸ್ ಪಡೆಯಬೇಕು. ಬಿಎಸ್ವೈ ಜತೆಗೆ ಮಾತು ಕತೆ ವಿವರ ಬಹಿರಂಗವಾಗಿ ಹೇಳಲಾಗದು. | ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ