ಬಿಎಸ್​ವೈ ಕೆಳಗಿಳಿದ್ರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ: ಶ್ರೀಗಳ ಎಚ್ಚರಿಕೆ

bsy
Published on

ಬೆಂಗಳೂರು: ಸಿಎಂ ಯಡಿಯೂರಪ್ಪ ಪದಚ್ಯುತಿಗೆ ಯತ್ನ ವಿಚಾರ ಮುನ್ನಲೆಗೆ ಬರುತ್ತಲೇ ವಿವಿಧ ಮಠಾಧೀಶರು ಬಿಎಸ್​ವೈ ಪರ ಧ್ವನಿ ಎತ್ತಿದ್ದು, ಇಂದು ಮಠಾಧೀಶರ ನಿಯೋಗವು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ಸಿಎಂ ಭೇಟಿ ಬಳಿಕ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ಬಿಎಸ್​ವೈ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ ಆಗಲಿದೆ. ನಮಗೆ ಯಾವ ಪಾರ್ಟಿಯೂ ಗೊತ್ತಿಲ್ಲ. ಹೈಕಮಾಂಡ್​ ಕೂಡ ಗೊತ್ತಿಲ್ಲ. ಆದರೆ ಯಡಿಯೂರಪ್ಪನವರು ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ಸಿಎಂ ಆಗಿ ಅವಧಿ ಪೂರ್ಣಗೊಳಿಸಬೇಕು. ನಾವು ಯಡಿಯೂರಪ್ಪ ಪರ ನಿಲ್ಲುತ್ತೇವೆ. ಶೀಘ್ರದಲ್ಲೇ ಬೆಂಗಳೂರಲ್ಲಿ 600ಕ್ಕೂ ಹೆಚ್ಚು ಸ್ವಾಮೀಜಿಗಳು ಸಭೆ ನಡೆಸುತ್ತೇವೆ ಎಂದರು.

ರಾಜ್ಯದ ವಿವಿಧ ಜಿಲ್ಲೆಯಿಂದ ವಿವಿಧ ಸಮಾಜದ ಸ್ವಾಮೀಜಿಗಳು ಸಿಎಂ ಅವರನ್ನು ಭೇಟಿ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದೆವು. ಅದಕ್ಕೆ ಉತ್ತರಸಿದ ಬಿಎಸ್​ವೈ, ನಾನು ಸದ್ಯ ಏನನ್ನೂ ಮಾತನಾಡಲು ಸಿದ್ಧ ಇಲ್ಲ. ಹೈಕಮಾಂಡ್ ಹೇಳಿದ ಹಾಗೆ ಕೇಳುತ್ತೇನೆ ಎಂದಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರನ್ನು ಪೂರ್ಣ ಅಧಿಕಾರ ಮಾಡುವುದಕ್ಕೆ ಬಿಡದಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ ಆಗಲಿದೆ ಎಂದು ದಿಂಗಾಲೇಶ್ವರ ಶ್ರೀಗಳು ಎಚ್ಚರಿಸಿದರು.

ಯಡಿಯೂರಪ್ಪ ಅವರು ಈ ರಾಜ್ಯಕ್ಕೆ ಬಹಳ ದುಡಿದಿದ್ದಾರೆ. ಯಡಿಯೂರಪ್ಪರ ಬೆನ್ನಿಗೆ ಹೈಕಮಾಂಡ್ ನಿಂತು ಅವರಿಗೆ ಕೆಲಸ ಮಾಡಲು ಬಿಡಬೇಕು. ಈ ಹಿಂದೆ ಲಿಂಗಾಯತ ಸಮುದಾಯದ ನಾಯಕರನ್ನು ಬದಲಾವಣೆ ಮಾಡಿದ ಆ ಪಕ್ಷಕ್ಕೆ ಏನೆಲ್ಲ ಆಯ್ತು? ಎಂದು ನೋಡಿದ್ದೇವೆ. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದ್ರೆ ಮುಂದೆ ಕೆಟ್ಟ ಪರಿಣಾಮ ಎದುರಿಸುತ್ತಾರೆ. ಲಿಂಗಾಯತ ಎಂದು ಯಡಿಯೂರಪ್ಪರನ್ನು ಸಿಎಂ ಮಾಡಿಲ್ಲ, ಅವರ ನಾಯಕತ್ವ, ಕೆಲಸ ನೋಡಿ ಕೂರಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net