

ಕಲಬುರಗಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬುದ್ದಿ ಭ್ರಮಣೆಯಾಗಿದ್ದು, ಮೆಡಿಕಲ್ ಚೆಕಪ್ ಮಾಡಿಸುವ ಅವಶ್ಯಕತೆ ಇದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ರಾಹುಲ್ ಗಾಂಧಿ ರಾಜ್ಯದಲ್ಲಿ ಬಿಜೆಪಿ 40 ಸ್ಥಾನ ಗಳಿಸುವ ಹೇಳಿಕೆಗೆ ಹುಣಸಗಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. 130 ಸ್ಥಾನ ಗೆದ್ದು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಲಿಂಗಾಯತರನ್ನು ಹೊರಗಿಟ್ಟು ಮುಖ್ಯಮಂತ್ರಿ ಮಾಡುವ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿಕೆಗೆ ಉತ್ತರಿಸುತ್ತಾ, ಶೆಟ್ಟರ್ ಸದ್ಯ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅವರಿಗೆ ನಮ್ಮ ಬಗ್ಗೆ ಯಾಕೆ ಚಿಂತೆ ಎಂದು ಹೇಳಿದರು.
ಕೊರಟಗೆರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮೇಲೆ ಕಲ್ಲು ತೂರಾಟ ನಡೆದಿರುವುದು ದುರದೃಷ್ಟಕರ ಸಂಗತಿ. ಈ ರೀತಿ ಘಟನೆ ನಡೆಯಬಾರದಿತ್ತು. ಅಲ್ಲದೆ ಘಟನೆ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತಿಳಿಸಿದ್ದೇನೆ. ತನಿಖೆ ನಡೆಸಲಾಗುತ್ತಿದೆ ಎಂದರು.
ಶಾಸಕ ಬಸನಗೌಡ ಯತ್ನಾಳ್ ಸೋನಿಯಾ ಗಾಂಧಿಯನ್ನು ವಿಷಕನ್ಯೆ ಎಂದಿರುವುದು ಸರಿಯಲ್ಲ. ಇಂಥ ಹೇಳಿಕೆ ಯಾರೂ ಕೊಡಬಾರದು ಎಂದು ಬಿಎಸ್ವೈ ರಾಜಕೀಯ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದರು.