

ಬೆಳಗಾವಿ: ಬರೀ ತಗಡಷ್ಟೇ ಬಿದ್ದಿದ್ದಾಗಿದ್ದರೆ ಈ ಇಬ್ಬರು ಸಹೋದರರು ಬಹುಶಃ ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿ ಬದುಕುಳಿಯುತ್ತಿದ್ದರು. ಆದರೆ ಜತೆಗೆ ವಿದ್ಯುತ್ ಶಾಕ್ ಕೂಡ ತಗುಲಿದ್ದರಿಂದ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಬೆಳಗಾವಿ ಜಿಲ್ಲೆ ದೇಸೂರ್ ಗ್ರಾಮದ ನಿವಾಸಿಗಳಾದ ಬಸವರಾಜ್ ವಡ್ಡರ್ ಹಾಗೂ ವೆಂಕಟೇಶ್ ವಡ್ಡರ್ ಮೃತಪಟ್ಟ ಸಹೋದರರು. ತಗಡಿನ ಶೆಡ್ನಲ್ಲಿದ್ದ ಇವರಿಗೆ ಅದೇ ಮಾರಕವಾಗಿ ಪರಿಣಮಿಸಿದೆ.
ಸತತವಾಗಿ ಮಳೆ ಸುರಿಯುತ್ತಿದ್ದುದರಿಂದ ತಗಡಿನ ಛಾವಣಿ ಕುಸಿದಿದೆ. ಆದರೆ ಈ ಶೆಡ್ಗೆ ವಿದ್ಯುತ್ ಸಂಪರ್ಕ ಇದ್ದುದರಿಂದ, ಕುಸಿದ ತಗಡಿಗೆ ವಿದ್ಯುತ್ ತಗುಲಿ, ಸಹೋದರರಿಬ್ಬರಿಗೂ ಶಾಕ್ ಹೊಡೆದಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.