ಲಂಡನ್/ನವದೆಹಲಿ: ಬ್ರಿಟನ್ನಲ್ಲಿ ಕರೊನಾ ಅಟ್ಟಹಾಸ ಉಲ್ಬಣಿಸಿದ್ದು, ಹೊಸ ರೂಪಾಂತರ ವೈರಸ್ ವ್ಯಾಪಕವಾಗಿ ಪಸರಿಸುತ್ತಿದೆ. ಪರಿಸ್ಥಿತಿ ಈಗಾಗಲೇ ಕೈಮೀರಿದ್ದು, ಬ್ರಿಟನ್ನಾದ್ಯಂತ ಸೋಂಕು ಪಸರಿಸಿದೆ. ಹೊಸ ವೈರಸ್ ಮೊದಲಿನದಕ್ಕಿಂತಲೂ ಶೇಕಡ 70ರಷ್ಟು ವೇಗವಾಗಿ ಪಸರಿಸುತ್ತಿದ್ದು, ಭಾರಿ ಆತಂಕ ಎದುರಾಗಿದೆ.
ಮುಂಜಾಗ್ರತಾ ಕ್ರಮವಾಗಿ ಹಲವು ರಾಷ್ಟ್ರಗಳು ಬ್ರಿಟನ್ಗೆ ವಿಮಾನ ಸಂಚಾರ ನಿರ್ಬಂಧಿಸಿವೆ. ಪರಿಸ್ಥಿತಿ ತೀವ್ರ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಲಂಡನ್ನಲ್ಲಿ ತುರ್ತು ಸಭೆ ಕರೆದಿದ್ದು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರ್ಚಚಿಸಲಿದ್ದಾರೆ. ಹೊಸ ರೂಪಾಂತರ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದ್ದು, ಸೋಂಕು ಪಸರಿಸದಂತೆ ತಡೆಯಲು ಯುರೋಪಿನಾದ್ಯಂತ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಸೂಚಿಸಿದೆ. ಬ್ರಿಟನ್ನಾದ್ಯಂತ ಈಗಾಗಲೇ ಕಠಿಣ ಲಾಕ್ಡೌನ್ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಜನರಿಗೆ ಮನೆಯಿಂದ ಹೊರಬರದಂತೆ ಆದೇಶಿಸಲಾಗಿದೆ. ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನೂ ಬಹುತೇಕ ಸ್ಥಗಿತಗೊಳಿಸಲಾಗಿದ್ದು, ಸೋಂಕು ಪಸರಿಸುವಿಕೆಯನ್ನು ಹಿಡಿತಕ್ಕೆ ತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಇಟಲಿ, ಬೆಲ್ಜಿಯಂ, ಭಾರತ, ದಕ್ಷಿಣ ಆಫ್ರಿಕಾ, ಅಮೆರಿಕ, ನೆದರ್ಲೆಂಡ್, ಜರ್ಮನಿ ಸೇರಿ ಹಲವು ದೇಶಗಳು ಬ್ರಿಟನ್ನಿಂದ ಬರುವ ಹಾಗೂ ಅಲ್ಲಿಗೆ ತೆರಳುವ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿವೆ. ಇನ್ನೂ ಹಲವು ದೇಶಗಳು ಈ ಕ್ರಮ ಜರುಗಿಸುವ ಚಿಂತನೆಯಲ್ಲಿವೆ. ಹೊಸ ರೂಪಾಂತರ ವೈರಸ್ ಪಸರಿಸುವಿಕೆ ಈಗಾಗಲೇ ಕೈಮೀರಿದ್ದು, ಪರಿಸ್ಥಿತಿ ಕಠಿಣವಾಗಿದೆ ಎಂದು ಬ್ರಿಟನ್ನ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಯುರೋಪ್ನ ಹಲವು ರಾಷ್ಟ್ರಗಳು ಕ್ರಿಸ್ವುಸ್ಗೆ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸುವ ಚಿಂತನೆಯನ್ನೂ ಕೈಬಿಟ್ಟಿವೆ. ಮೂಲ ವೈರಸ್ಗಿಂತ ಹೊಸ ವೈರಸ್ ಸೌಮ್ಯವಾಗಿಲ್ಲ. ಅದು ತೀವ್ರವಾಗಬಹುದು ಎಂದು ಹಲವು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬ್ರಿಟನ್ನಲ್ಲಿ ವರದಿಯಾಗಿರುವ ಹೊಸ ರೂಪಾಂತರ ವೈರಸ್ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ವಹಿಸಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ. ಕಾಲ್ಪನಿಕ ಸನ್ನಿವೇಶಗಳು ಮತ್ತು ವಿಷಯಗಳಿಂದ ಭೀತಿಗೆ ಒಳಗಾಗಬೇಡಿ. ಸರ್ಕಾರ ಸಂಪೂರ್ಣ ಎಚ್ಚರವಾಗಿದೆ. ಕಳೆದೊಂದು ವರ್ಷದಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಕುರಿತು ಸೋಮವಾರ ಸಭೆ ನಡೆಸಿ ರ್ಚಚಿಸಲಾಗಿದೆ. ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.
ಹೊಸದಾಗಿ ಪಸರಿಸುತ್ತಿರುವ ಸೋಂಕು ಬ್ರಿಟನ್ನಿಂದ ಇತ್ತೀಚೆಗೆ ಮರಳಿದ್ದ ನೆದರ್ಲೆಂಡ್ನ ಓರ್ವ ಹಾಗೂ ಇಟಲಿಯ ಓರ್ವ ಪ್ರಜೆಯಲ್ಲಿ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು, ಬ್ರಿಟನ್ಗೆ ಇತ್ತೀಚೆಗೆ ಪ್ರಯಾಣ ಕೈಗೊಂಡಿದ್ದವರಿಗಾಗಿ ಶೋಧ ನಡೆಸಲಾಗುತ್ತಿದೆ.
ಬ್ರಿಟನ್ನಲ್ಲಿ ಮಾರ್ಚ್ ಮಧ್ಯಭಾಗದಲ್ಲಿ ಕರೊನಾ ಪ್ರಕರಣಗಳು ಉಲ್ಬಣಿಸಿ ಜೂನ್ ಅಂತ್ಯದ ವೇಳೆಗೆ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದ್ದವು. ಈ ಅವಧಿಯಲ್ಲಿ ಒಂದೇ ದಿನ ಗರಿಷ್ಠ 8 ಸಾವಿರ ಪ್ರಕರಣಗಳನ್ನು ಮಾತ್ರ ಬ್ರಿಟನ್ ದಾಖಲಿಸಿತ್ತು. ಆದರೆ ಆಗಸ್ಟ್ ಅಂತ್ಯದಿಂದ ಮತ್ತೆ ಉಲ್ಬಣಗೊಂಡ ಕರೊನಾ ದಿನೇದಿನೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಾ ಹೋಯಿತು. ಪ್ರತಿದಿನ 35 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದರಿಂದಾಗಿ ಒಟ್ಟು ಪ್ರಕರಣಗಳು ಈವರೆಗೆ 20 ಲಕ್ಷದ ಗಡಿ ದಾಟಿವೆ. ಭಾನುವಾರ 35 ಸಾವಿರ ಹೊಸ ಪ್ರಕರಣಗಳು ವರದಿಯಾಗಿವೆ. ಈವರೆಗೆ 67 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸದ್ಯ ಪ್ರತಿದಿನದ ಮರಣ ಪ್ರಮಾಣ ಸರಾಸರಿ 500 ಇದೆ.
ಬ್ರಿಟನ್ ಹಾಗೂ ಅಮೆರಿಕದ ತಜ್ಞರ ಪ್ರಕಾರ, ಹೊಸ ರೂಪಾಂತರ ವೈರಸ್ ಹೆಚ್ಚು ವೇಗ ಹಾಗೂ ಸುಲಭವಾಗಿ ಒಬ್ಬರಿಂದೊಬ್ಬರಿಗೆ ಹರಡುತ್ತಿದೆ ಎನ್ನಲಾಗಿದೆ. ಆದಾಗ್ಯೂ ಇದು ಹೆಚ್ಚು ಮಾರಕವಾಗಿದೆಯೇ ಎಂಬ ಬಗ್ಗೆ ತಕ್ಷಣಕ್ಕೆ ಯಾವುದೇ ಪುರಾವೆಗಳು ಲಭಿಸಿಲ್ಲ. ಡಿಸೆಂಬರ್ ಅಂತ್ಯದ ವೇಳೆಗೆ ಬ್ರಿಟನ್ನಲ್ಲಿ ಶೇಕಡ 60ರಷ್ಟು ಹೊಸ ಸೋಂಕು ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ. ತಜ್ಞರು ವ್ಯಕ್ತಪಡಿಸಿರುವ ಪ್ರಮುಖ ಆತಂಕವೆಂದರೆ ವೈರಸ್ ರೂಪಾಂತರಗೊಂಡಾಗ ಅದು ತನ್ನ ಮೇಲ್ಮೈನ ಪ್ರೋಟಿನ್ಗಳನ್ನು ಬದಲಾಯಿಸುವ ಮೂಲಕ ಲಸಿಕೆ ಅಥವಾ ಪ್ರತಿಕಾಯಗಳಿಂದ ರಕ್ಷಣೆ ಪಡೆಯಬಹುದು ಎನ್ನುವುದು. ಈ ಮೊದಲು ಕಳೆದ ಏಪ್ರಿಲ್ನಲ್ಲಿ ಸ್ವೀಡನ್ನಲ್ಲಿ ಕರೊನಾದ ಮೊದಲ ರೂಪಾಂತರ ವೈರಸ್ ಪತ್ತೆ ಮಾಡಲಾಗಿತ್ತು. ಅದು ಮೂಲ ವೈರಸ್ಗಿಂತ ಎರಡು ಪಟ್ಟು ಹೆಚ್ಚು ಸಾಂಕ್ರಾಮಿಕ ಎಂದು ತಜ್ಞರು ಹೇಳಿದ್ದರು. ಬಳಿಕ ಬ್ರಿಟನ್, ಫ್ರಾನ್ಸ್, ಅಮೆರಿಕ ಸೇರಿ ಹಲವು ದೇಶಗಳಲ್ಲಿ ರೂಪಾಂತರ ವೈರಸ್ಗಳು ಪತ್ತೆಯಾಗಿದ್ದವಾದರೂ ಅವು ಅಷ್ಟೊಂದು ಮಾರಕವಾಗಿರಲಿಲ್ಲ. ಸದ್ಯ ಅಸ್ತಿತ್ವದಲ್ಲಿರುವ ಲಸಿಕೆಗಳಿಗೆ ಹೊಸ ರೂಪಾಂತರ ವೈರಸ್ಗಳು ನಿರೋಧಕವಾಗಿರುವ ಸಾಧ್ಯತೆ ಕಡಿಮೆ ಎಂದು ಅಮೆರಿಕದ ತಜ್ಞರು ಹೇಳಿದ್ದಾರೆ.