ಗುಜರಾತ್​ನಲ್ಲಿ ಸೇತುವೆ ಕುಸಿದು 9 ಮಂದಿ ದುರ್ಮರಣ: ಅನೇಕ ವಾಹನಗಳು ನೀರು ಪಾಲು, ನೇತಾಡಿದ ಟ್ರಕ್​! Bridge collapses in Gujarat

Bridge collapses in Gujarat
Published on

Bridge collapses in Gujarat : ಸೇತುವೆ ಕುಸಿದುಬಿದ್ದ ಪರಿಣಾಮ ಕನಿಷ್ಠ 9 ಮಂದಿ ದುರಂತ ಸಾವಿಗೀಡಾಗಿ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ಗುಜರಾತಿನಲ್ಲಿ ನಡೆದಿದೆ.

ವಡೋದರಾ ಜಿಲ್ಲೆಯ ಪಾದ್ರಾ ಮುಜಫುರ್​ ಪ್ರದೇಶದಲ್ಲಿ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಗಂಭೀರಾ ಸೇತುವೆಯ ಒಂದು ಭಾಗ ಕುಸಿದು ದುರ್ಘಟನೆ ಸಂಭವಿಸಿದೆ. ಈ ಸೇತುವೆ ವಡೋದರಾ ಮತ್ತು ಆನಂದ್ ನಗರವನ್ನು ಸಂಪರ್ಕಿಸುತ್ತಿತ್ತು. ಸೇತುವೆ ಕುಸಿದು, ಐದು ವಾಹನಗಳು ನದಿಯ ಪಾಲಾಗಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಈ ಅವಘಡದಿಂದ ಹಲವು ಮಂದಿಯನ್ನು ರಕ್ಷಿಸಲಾಗಿದೆ.

ಸೇತುವೆ ಕುಸಿದ ಬಳಿಕ ಕನಿಷ್ಠ ಐದು ವಾಹನಗಳು ನದಿಗೆ ಬಿದ್ದಿವೆ ಎಂದು ಪ್ರಾಥಮಿಕ ಮಾಹಿತಿ ಸೂಚಿಸುತ್ತದೆ ಎಂದು ಗುಜರಾತ್ ಸರ್ಕಾರದ ವಕ್ತಾರ ಮತ್ತು ಸಚಿವ ರಿಷಿಕೇಶ್ ಪಟೇಲ್ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿದ್ದು, ಮುರಿದ ಸೇತುವೆಯ ಮಧ್ಯದಲ್ಲಿ ಸೂಕ್ಷ್ಮವಾಗಿ ನಿಂತಿರುವ ಟ್ರಕ್ ದಾರದಂತೆ ನೇತಾಡುತ್ತಿರುವುದನ್ನು ಕಾಣಬಹುದು.

ಸೇತುವೆಯ ಮೇಲಿನ ಸಂಚಾರದ ಪ್ರಮಾಣವನ್ನು ಪರಿಗಣಿಸಿ, ಮುಖ್ಯಮಂತ್ರಿಗಳು ಮೂರು ತಿಂಗಳ ಹಿಂದಷ್ಟೇ 212 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಸೇತುವೆಗೆ ಅನುಮೋದನೆ ನೀಡಿದ್ದರು. ಹೊಸ ಸೇತುವೆಯ ವಿನ್ಯಾಸ ಮತ್ತು ಟೆಂಡರ್ ಕಾರ್ಯ ಈಗಾಗಲೇ ಪ್ರಾರಂಭವಾಗಿತ್ತು. ಈ ಘಟನೆಯ ನಂತರ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಕ್ಷಣವೇ ಮುಖ್ಯ ಇಂಜಿನಿಯರ್, ಸೇತುವೆ ವಿನ್ಯಾಸ ತಂಡ ಮತ್ತು ತಜ್ಞರನ್ನು ಸ್ಥಳಕ್ಕೆ ರವಾನಿಸಿ ವಿವರವಾದ ವರದಿಯನ್ನು ನೀಡುವಂತೆ ಆದೇಶಿಸಿದ್ದಾರೆ.

ಗಂಭೀರಾ ಸೇತುವೆಯ ನಿರ್ಮಾಣವು 1981ರಲ್ಲಿ ಪ್ರಾರಂಭವಾಯಿತು ಮತ್ತು 1985 ರಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಯಿತು. 2017 ರಲ್ಲಿ, ಸೇತುವೆಯ ಸ್ಥಿತಿ ಹದಗೆಟ್ಟಿರುವುದರಿಂದ ಭಾರೀ ವಾಹನಗಳಿಗೆ ಪ್ರವೇಶವನ್ನು ನಿಷೇಧಿಸಬೇಕೆಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿತ್ತು. ಇದರ ನಡುವೆ, ಸರ್ಕಾರ ಹೊಸ ಸೇತುವೆ ಪ್ಲಾನ್​ ರೂಪಿಸುವಾಗಲೇ ಈ ಅವಘಡ ಸಂಭವಿಸಿದೆ.

ಈ ಘಟನೆಯನ್ನು "ತೀವ್ರ ದುಃಖಕರ" ಎಂದು ಕರೆದಿರುವ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸೇತುವೆಯ 23 ಸ್ಪ್ಯಾನ್‌ಗಳಲ್ಲಿ ಒಂದು ಕುಸಿದಿದೆ ಎಂದು ಹೇಳಿದ್ದಾರೆ. ವಡೋದರಾ ಜಿಲ್ಲಾಧಿಕಾರಿ ಜೊತೆ ಮಾತನಾಡಿದ ನಂತರ ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡಲು ಮತ್ತು ಅಗತ್ಯ ವ್ಯವಸ್ಥೆಗಳಿಗೆ ಆದ್ಯತೆ ನೀಡಲು ಸೂಚನೆಗಳನ್ನು ನೀಡಲಾಗಿದೆ ಎಂದು ಸಿಎಂ ಪಟೇಲ್ ಎಕ್ಸ್​ ಖಾತೆಯ ಮೂಲಕ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net