

Marriage : ವಿವಾಹೇತರ ಸಂಬಂಧವಿದೆ ಎಂದು ಅರೋಪಿಸಿ, ಯುವಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿ, ಆತನ ಚಿಕ್ಕಮನ ಜೊತೆ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಕಳೆದವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಜುಲೈ 2 ರಂದು ನಡೆದಿದ್ದು, 24 ವರ್ಷದ ಮಿಥಲೇಶ್ ಕುಮಾರ್ ಮುಖಿಯಾ ಎಂಬ ಯುವಕನನ್ನು ಅಪಹರಿಸಿದ ಒಂದು ಗುಂಪು, ಭೀಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೀವ್‌ಚಾಪುರ ವಾರ್ಡ್ ಸಂಖ್ಯೆ 8ರಲ್ಲಿ ಮಿಥಲೇಶ್ ಅವರ ಚಿಕ್ಕಪ್ಪ ಶಿವಚಂದ್ರ ಮುಖಿಯಾ ಅವರಿಗೆ ಸೇರಿದ ಮನೆಗೆ ಕರೆದೊಯ್ದಿತು. ಬಳಿಕ, ಅಲ್ಲಿ ಬಲವಂತವಾಗಿ ಮದುವೆ ಮಾಡಿಸಿದೆ.
ಶಿವಚಂದ್ರ ಅವರ ಪತ್ನಿ ರೀತಾ ದೇವಿ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂಬ ಆರೋಪಕ್ಕೆ ಒಂದು ಗುಂಪು, ನನ್ನ ಮಗನನ್ನು ಹಿಗ್ಗಾಮುಗ್ಗಾ ಥಳಿಸಿದೆ ಎಂದು ಮಿಥಲೇಶ್ ಅವರ ತಂದೆ ರಾಮಚಂದ್ರ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಶಿವಚಂದ್ರ ಮತ್ತು ರೀತಾ ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ ಅಂತಾನೂ ಉಲ್ಲೇಖಿಸಿದ್ದಾರೆ. ರೀಟಾ ಜತೆ ನನ್ನ ಮಗನಿಗೆ ಸಂಬಂಧವಿದೆ ಎಂದು ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ರಾಮಚಂದ್ರ ತಿಳಿಸಿದ್ದಾರೆ.
ಮಿಥಿಲೇಶ್ರನ್ನು ಕಿಡ್ನಾಪ್ ಮಾಡಿದ ಗುಂಪು ಆತನನ್ನು ರಾಡ್‌ಗಳಿಂದ ಹಲ್ಲೆ ಮಾಡುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೇಳೆ ರೀತಾಳನ್ನೂ ಅದೇ ಸ್ಥಳಕ್ಕೆ ಕರೆತಂದು ಆ ಗುಂಪು ಥಳಿಸಿದೆ. ಇದಾದ ನಂತರ ಮಿಥಿಲೇಶ್ನನ್ನು ರೀಟಾ ಅವರ ಹಣೆಯ ಮೇಲೆ ಸಿಂದೂರ ಹಚ್ಚುವಂತೆ ಒತ್ತಾಯಿಸಿದೆ ಎಂದು ಮಿಥಿಲೇಶ್ ತಂದೆ ರಾಮಚಂದ್ರ ಆರೋಪಿಸಿದ್ದಾರೆ.
ನಾವು ತಡೆಯಲು ಪ್ರಯತ್ನ ಮಾಡಿದಾಗ ಆ ಗುಂಪು, ನನ್ನ ಮೇಲೆ ಹಾಗೂ ನನ್ನ ಪತ್ನಿಯ ಮೇಲೆಯೂ ಹಲ್ಲೆ ಮಾಡಿತು. ಹಲ್ಲೆಯಲ್ಲಿ ನನ್ನ ಮಗನ ಬೆನ್ನು, ಕುತ್ತಿಗೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿವೆ ಎಂದು ರಾಮಚಂದ್ರ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಈ ಘಟನೆಯ ಬಗ್ಗೆ ಗ್ರಾಮಸ್ಥರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಭೀಮ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಂಜ್ ನಿವಾಸಿಗಳಾದ ರಾಜ ಕುಮಾರ್, ವಿಕಾಸ್ ಮುಖಿಯಾ, ಶಿವಚಂದ್ರ ಮುಖಿಯಾ, ಸೂರಜ್ ಮುಖಿಯಾ, ಪ್ರದೀಪ್ ಠಾಕೂರ್ ಹಾಗೂ ಸುರೇಶ್ ಮುಖಿಯಾ ಎಂಬುವರೇ ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಇವರೆಲ್ಲರೂ ಜೀವ್‌ಚಾಪುರ ನಿವಾಸಿಗಳು ಎಂದು ರಾಮಚಂದ್ರ ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಭೀಮಪುರ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮಿಥಲೇಶ್ ಪಾಂಡೆ ಮಾತನಾಡಿ, ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಮಿಥಲೇಶ್ ಅವರನ್ನು ಆರಂಭದಲ್ಲಿ ನರಪತ್‌ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ, ನಂತರ ಅವರ ಸ್ಥಿತಿ ಗಂಭೀರವಾಗಿದ್ದು, ಅರಾರಿಯಾ ಸದರ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)