ಮದ್ವೆ ಹಿಂದಿನ ದಿನ ಸೆಲ್ಫಿ ತೆಗೆಯಲು ಹೋಗಿ ಕಲ್ಲು ಕ್ವಾರಿಗೆ ಬಿದ್ದ ವಧು-ವರ!

Bride Groom
Published on

ಕೊಲ್ಲಂ: ಮದುವೆಯ ಹಿಂದಿನ ದಿನ ಸೆಲ್ಫಿ ತೆಗೆದುಕೊಳ್ಳುವ ವೇಳೆ ವಧು ಮತ್ತು ವರ ಕಲ್ಲು ಕ್ವಾರಿ ಕೊಳದಲ್ಲಿ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದ್ದು, ಸ್ಥಳೀಯರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.

ಈ ಘಟನೆ ಕಲ್ಲುವಾತುಕ್ಕಲ್‌ನ ಕಟ್ಟುಪುರಂ ಆಯಿರವಿಲ್ಲಿ ಕ್ವಾರಿ ಕೊಳದಲ್ಲಿ ಗುರುವಾರ ನಡೆದಿದೆ. ಅವಘಡದಿಂದ ಪಾರಾದ ನವಜೋಡಿಯನ್ನು ಪರವೂರಿನ ರಾಧಾಕೃಷ್ಣನ್ ಮತ್ತು ಶೀಲಾ ದಂಪತಿಯ ಪುತ್ರ ವಿನು ವಿ. ಕೃಷ್ಣನ್ ಮತ್ತು ಕಲ್ಲುವಾತುಕಲ್‌ನ ದಿವಂಗತ ಶ್ರೀಕುಮಾರ್ ಮತ್ತು ಸರಿತಾ ಅವರ ಪುತ್ರಿ ಸಾಂದ್ರಾ ಎಸ್. ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರ ಮದುವೆ ಇಂದು ಪಾರಿಪಲ್ಲಿ ಪಾಂಬುರಂ ಮಹಾವಿಷ್ಣು ದೇವಸ್ಥಾನದಲ್ಲಿ ನಿಗದಿಯಾಗಿತ್ತು.

ವಧುವಿನ ಮನೆಯಲ್ಲಿ ಮದುವೆಯ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದಾಗ, ವಧು-ವರ ಇಬ್ಬರು ಕಲ್ಲು ಕ್ವಾರಿಯನ್ನು ತಲುಪಿ, ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕಾಲು ಜಾರಿ ವಧು ಕೊಳಕ್ಕೆ ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲೆಂದು ಕೂಡಲೇ ವರ ಕೊಳಕ್ಕೆ ಜಿಗಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಈ ವಿಚಾರ ಸಮೀಪದಲ್ಲಿಯೇ ಇದ್ದ ಸ್ಥಳೀಯರ ಗಮನಕ್ಕೆ ಬಂದಿದ್ದು, ಪಾರಿಪಲ್ಲಿ ಪೊಲೀಸರು ಮತ್ತು ನವೈಕುಲಂನಿಂದ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ, ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಿಸಿ ದಡಕ್ಕೆ ಕರೆತಂದರು. ನಂತರ ಇಬ್ಬರನ್ನು ಪಾರಿಪಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.

ವಧು ಸಾಂದ್ರಾಗೆ ಬೆನ್ನು ಮೂಳೆ ಮತ್ತು ಕಾಲಿಗೆ ಗಾಯಳಾಗಿದ್ದು, ಮೂರು ತಿಂಗಳು ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ವಧು ಸಂಪೂರ್ಣ ಗುಣವಾದ ಬಳಿಕ ಮದುವೆ ಮಾಡಲು ಎರಡೂ ಕುಟುಂಬ ನಿರ್ಧರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net