

Bride And Groom : ಮದುವೆಯಾದ ಬಳಿಕ ಫೋಟೋಶೂಟ್ಗಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನವದಂಪತಿಯ ಮೇಲೆ ಯುವಕರ ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಕೇರಳದ ಪತ್ತನಂತಿಟ್ಟದ ಮಲ್ಲಪ್ಪಲ್ಲಿಯ ಕಲ್ಲೂಪ್ಪರದ ನೆಡುಂಬರದಲ್ಲಿ ನಡೆದಿದೆ.
ತಮ್ಮ ಬೈಕ್ಗಳಿಗೆ ದಾರಿ ನೀಡಲಿಲ್ಲ ಎಂಬ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಮೂವರು ಸಹೋದರರು ಸೇರಿದಂತೆ ನಾಲ್ವರು ಆರೋಪಿಗಳನ್ನು ಕೀಳವೈಪುರ ಪೊಲೀಸರು ಬಂಧನ ಮಾಡಿದ್ದಾರೆ.
ಬಂಧಿತರನ್ನು ಅಭಿಜಿತ್ ಅಜಿ (27), ಅಖಿಲಜಿತ್ ಅಜಿ (25), ಅಮಲಜಿತ್ ಅಜಿ (22) ಮತ್ತು ಮಯೂಖ್ ನಾಥ್ (20) ಎಂದು ಗುರುತಿಸಲಾಗಿದೆ. ನವವಿವಾಹಿತರಾದ ನೆಡುಂಪಾರ ಕೋಲನಿಕಲ್ ಮಲಯಿಲ್ ಮೂಲದ ಮುಖೇಶ್ ಮೋಹನ್ (31) ಮತ್ತು ಕೊಟ್ಟಾಯಂನ ಕುರಿಚಿ ಮೂಲದ ದೀಪ್ತಿ ಮೋಲ್ ಮೇಲೆ ಹಲ್ಲೆ ಮಾಡಲಾಗಿದೆ.
ಆಗಸ್ಟ್ 17 ರಂದು ಅದ್ಧೂರಿ ಮದುವೆ ಸಮಾರಂಭ ನಡೆಯಿತು. ಸಂಜೆ 4 ಗಂಟೆಗೆ ಮುಖೇಶ್ ಮತ್ತು ದೀಪ್ತಿ ಫೋಟೋಶೂಟ್ಗಾಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಈ ವೇಳೆ ಮಾರ್ಗ ಮಧ್ಯೆ ಎರಡು ಬೈಕ್, ಕಾರಿನ ಹಿಂಬದಿಯಿಂದ ಬರುತ್ತಿತ್ತು. ಮುಂದೆ ಹೋಗಲು ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ವಧು-ವರರು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ. ಈ ವೇಳೆ ಕಾರಿನಲ್ಲಿ ಛಾಯಾಗ್ರಾಹಕರು ಕೂಡ ಇದ್ದರು. ಆರೋಪಿಗಳು ಕಾರಿನ ಹಿಂಭಾಗದ ಕಿಟಕಿಯನ್ನು ಒಡೆದು ಬಾಗಿಲುಗಳನ್ನು ಪುಡಿಪುಡಿ ಮಾಡಿ ಹಾನಿಗೊಳಿಸಿದ್ದಾರೆ.
ಅಂದಹಾಗೆ, ಒಂದು ವರ್ಷದ ಹಿಂದೆ ಅಭಿಜಿತ್ ಮದುವೆಯ ದಿನದಂದು ಮುಖೇಶ್ ಸ್ನೇಹಿತರು ಮತ್ತು ಆರೋಪಿಗಳ ನಡುವೆ ಜಗಳವಾಗಿತ್ತು ಎಂದು ಹೇಳಲಾಗಿದೆ. ಅಲ್ಲದೆ, ಅಖಿಲ್‌ಜಿತ್ ಮತ್ತು ಅಮಲ್‌ಜಿತ್ ಕೂಡ ಮತ್ತೊಂದು ಜಗಳದಲ್ಲಿ ಆರೋಪಿಗಳಾಗಿದ್ದಾರೆ. ಹೀಗಾಗಿ ಹಳೆಯ ದ್ವೇಷವು ಹಲ್ಲೆಗೆ ಕಾರಣ ಇರಬಹುದು ಎನ್ನಲಾಗುತ್ತಿದೆ. ಈ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)