ಅಧಿಕಾರಕ್ಕೆ ಬಂದ್ರೆ ನಿಮ್ಮನ್ನು ಸುಮ್ಮನೆ ಬಿಡಲ್ಲ: ಮೂವರು ಚುನಾವಣಾ ಅಧಿಕಾರಿಗಳಿಗೆ ರಾಹುಲ್​ ಎಚ್ಚರಿಕೆ! Rahul Gandhi

Rahul Gandhi
Published on

Rahul Gandhi : ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಇಂಡಿಯಾ ಒಕ್ಕೂಟ ಸರ್ಕಾರ ರಚಿಸಿದರೆ ಮತ ಕಳ್ಳತನ ಪ್ರಕರಣದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸೋಮವಾರ (ಆಗಸ್ಟ್​ 18) ಎಚ್ಚರಿಸಿದ್ದಾರೆ.

ಬಿಹಾರದ ಗಯಾದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಆಯೋಗದ "ಮತ ಕಳ್ಳತನ" ಬಯಲಾದ ಬಳಿಕವೂ ನನ್ನನ್ನು ಅಫಿಡವಿಟ್ ಸಲ್ಲಿಸಲು ಚುನಾವಣಾ ಆಯೋಗ ಕೇಳುತ್ತಿದೆ ಎಂದರು. ಮತ ಕಳ್ಳತನ ಎಂಬುದು 'ಭಾರತ ಮಾತೆಯ' ಆತ್ಮದ ಮೇಲಿನ ದಾಳಿ ಎಂದು ರಾಹುಲ್​ ಅವರು ಇದೇ ವೇಳೆ ಪ್ರತಿಪಾದಿಸಿದರು.

ಇಡೀ ದೇಶ ನಿಮ್ಮನ್ನು ಅಫಿಡವಿಟ್ ನೀಡುವಂತೆ ಕೇಳುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ನಾನು ಹೇಳಲು ಬಯಸುತ್ತೇನೆ. ನಮಗೆ ಸ್ವಲ್ಪ ಸಮಯ ನೀಡಿ, ಪ್ರತಿ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದಲ್ಲಿ ನಿಮ್ಮ ಕಳ್ಳತನವನ್ನು ಹಿಡಿದು ಜನರ ಮುಂದೆ ಇಡುತ್ತೇವೆ. ಪ್ರಧಾನಿ ಮೋದಿ ಅವರು ವಿಶೇಷ ಪ್ಯಾಕೇಜ್ ಬಗ್ಗೆ ಮಾತನಾಡುವಂತೆಯೇ ಚುನಾವಣಾ ಆಯೋಗವು ಬಿಹಾರಕ್ಕೆ SIR ( ವಿಶೇಷ ತೀವ್ರ ಪರಿಷ್ಕರಣೆ) ಎಂಬ ವಿಶೇಷ ಪ್ಯಾಕೇಜ್ ಅನ್ನು ತಂದಿದೆ. ಇದರರ್ಥ ಮತ ಕಳ್ಳತನದ ಹೊಸ ರೂಪ ಎಂದು ರಾಹುಲ್ ಗಾಂಧಿ ಟೀಕಿಸಿದರು.

ಬಿಹಾರದ ಜನರು, ಚುನಾವಣಾ ಆಯುಕ್ತರು ಮತ್ತು ಬಿಜೆಪಿ ನಾಯಕರಿಗೆ "ಮತದಾನ ಕಳ್ಳತನ" ನಮ್ಮ ರಾಜ್ಯದಲ್ಲಿ ಸಾಧ್ಯವಿಲ್ಲ ಎಂದು ಒಂದೇ ಧ್ವನಿಯಲ್ಲಿ ಹೇಳಲಿದ್ದಾರೆ ಎಂದು ರಾಹುಲ್​, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಮೇಲೂ ನೇರ ವಾಗ್ದಾಳಿ ನಡೆಸಿದರು. ನಾನು ಏನು ಹೇಳುತ್ತೇನೋ ಅದನ್ನು ಮಾಡುತ್ತೇನೆ. ನಾನು ಯಾವುದೇ ವೇದಿಕೆಯಿಂದ ಸುಳ್ಳು ಹೇಳುವುದಿಲ್ಲ ಎಂಬುದನ್ನು ನೀವು ನೋಡಿದ್ದೀರಿ, ಈ ಮೂವರು ಚುನಾವಣಾ ಆಯುಕ್ತರಿಗೆ ನಾನು ಹೇಳಲು ಬಯಸುತ್ತಿದ್ದೇನೆ. ಈಗ ಮೋದಿ ಅವರ ಸರ್ಕಾರವಿದೆ. ಆದರೆ ಒಂದು ವಿಷಯ ಅರ್ಥಮಾಡಿಕೊಳ್ಳಿ, ಬಿಹಾರ ಮತ್ತು ದೆಹಲಿಯಲ್ಲಿ ಇಂಡಿಯಾ ಬ್ಲಾಕ್ ಸರ್ಕಾರ ಅಧಿಕಾರಕ್ಕೆ ಬರುವ ದಿನ ಬಂದೇ ಬರುತ್ತದೆ ಆಗ, ನಾವು ನಿಮ್ಮ ಮೂವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನೀವು ಇಡೀ ದೇಶದಿಂದ ಮತ ಕದ್ದಿದ್ದೀರಿ ಎಂದು ರಾಹುಲ್​ ಗಾಂಧಿ ಗಂಭೀರ ಆರೋಪ ಮಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net