ಗಂಡನ ಲ್ಯಾಪ್​ಟಾಪ್​ ನೋಡಿ ಪತ್ನಿ ಶಾಕ್​: 12ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾದ ಯುವ ವೈದ್ಯೆ! Female doctor

Female doctor
Published on

Female doctor : ಮದುವೆಯಾದ 10 ತಿಂಗಳೊಳಗೆ ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ಮೃತ ವೈದ್ಯೆಯನ್ನು ಜ್ಯೋತಿಶ್ವರಿ (30) ಎಂದು ಗುರುತಿಸಲಾಗಿದೆ. ಇವರು ಚೆನ್ನೈನ ಕೋಡಂಬಕ್ಕಂನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಜ್ಯೋತಿಶ್ವರಿ ಅವರು ಎಂಬಿಬಿಎಸ್ ಮತ್ತು ಎಂಎಸ್ ಓದಿದ್ದಾರೆ. ಅವರ ಸ್ವಂತ ಊರು ರಾಮನಾಥಪುರಂ. ಅವರು ಮೀನಂಬಕ್ಕಂನ ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು.

ಕಳೆದ ವರ್ಷ ನವೆಂಬರ್‌ನಲ್ಲಿ ರಾಮನಾಥಪುರಂ ಮೂಲದ ಯೋತೀಶ್ವರನ್ (34) ಎಂಬುವರನ್ನು ವಿವಾಹವಾಗಿದ್ದರು. ಇಂಜಿನಿಯರ್ ಆಗಿರುವ ಯೋತೀಶ್ವರನ್, ದುರೈಪಕ್ಕಂನ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೀಗಿರುವಾಗ ಗಂಡ-ಹೆಂಡತಿಯ ನಡುವೆ ಕೆಲವು ದಿನಗಳ ಹಿಂದೆ ಜಗಳ ಆರಂಭವಾಯಿತು. ಬಳಿಕ ಯೋತೀಶ್ವರನ್ ತನ್ನ ಹೆಂಡತಿಯನ್ನು ಬಿಟ್ಟು ತನ್ನ ಊರಿಗೆ ಹೋಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಅಲ್ಲದೆ, ಆಗಾಗ ಹೆಂಡತಿಯನ್ನು ನೋಡಲು ಬಂದು ಹೋಗುತ್ತಿದ್ದ. ಈ ಸಂದರ್ಭದಲ್ಲಿ, ಸತತ ಮೂರು ದಿನಗಳ ರಜೆ ಸಿಕ್ಕಾಗ, ಜ್ಯೋತಿಶ್ವರಿ ಪೆರುಂಗಲಥೂರಿನ ಶ್ರೀರಾಮ್ ಗೇಟ್‌ನಲ್ಲಿರುವ 12 ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ತನ್ನ ಸಹೋದರಿ ಮುತ್ತುಲಕ್ಷ್ಮಿಯ ಮನೆಗೆ ಹೋಗಿದ್ದರು.

ಆ ಸಂಜೆ ಜ್ಯೋತಿಶ್ವರಿ ಅವರು ತಮ್ಮ ಮನೆಗೆ ಹೋಗಲು ಮುಂದಾದರು. ಅಪಾರ್ಟ್ಮೆಂಟ್ 'ಲಿಫ್ಟ್' ಒಳಗೆ ಹೋದ ಜ್ಯೋತಿಶ್ವರಿ, ಕೆಳಗೆ ಹೋಗುವ ಬದಲು ಮೇಲಕ್ಕೆ ಹೋದರು. ಅವರು ಟೆರೇಸ್‌ ಮೇಲೆ ಹೋಗಿ, ತನ್ನ ಚಪ್ಪಲಿ ಮತ್ತು ಕೈಚೀಲವನ್ನು ತೆಗೆದಿಟ್ಟು, 12ನೇ ಮಹಡಿಯಿಂದ ಕೆಳಗೆ ಹಾರಿದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಜ್ಯೋತಿಶ್ವರಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟರು.

ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೀರ್ಕಂಕರಣೈ ಪೊಲೀಸರು ಸ್ಥಳಕ್ಕೆ ಧಾವಿಸಿ, ಜ್ಯೋತಿಶ್ವರಿಯ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಕ್ರೋಮ್‌ಪೇಟ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಕಳೆದ ನವೆಂಬರ್‌ನಲ್ಲಿ, ತನ್ನ ಪಾಲಕರು ನೋಡಿದ್ದ ವರ ಯೋತೀಶ್ವರನ್​ನನ್ನು ಪೂರ್ಣ ಹೃದಯದಿಂದ ಒಪ್ಪಿ ಜ್ಯೋತಿಶ್ವರಿ ಮದುವೆಯಾದರು. ಆದಾಗ್ಯೂ, ಯೋತೀಶ್ವರನ್ ತನ್ನ ಹೆಂಡತಿಗೆ ಹೆಚ್ಚಿನ ಆದ್ಯತೆ ನೀಡುತ್ತಿರಲಿಲ್ಲ. ಅದರ ಬದಲು, ಗಾಂಜಾ ಸೇರಿದಂತೆ ಇತರ ಅನೇಕ ಕೆಟ್ಟ ಅಭ್ಯಾಸಗಳಲ್ಲಿ ತೊಡಗಿಕೊಂಡಿದ್ದ. ಇದಲ್ಲದೆ, ಆತ ಡೇಟಿಂಗ್ ಅಪ್ಲಿಕೇಶನ್ ಮೂಲಕ 30ಕ್ಕೂ ಹೆಚ್ಚು ಮಹಿಳೆಯರನ್ನು ಭೇಟಿಯಾಗಿ, ಮದುವೆಯ ನಂತರವೂ ಅವರೊಂದಿಗೆ ಸಂಬಂಧವನ್ನು ಮುಂದುವರೆಸಿದ ಎಂದು ತಿಳಿದುಬಂದಿದೆ.

ತಾನು ಬಹಳ ಭರವಸೆಯಿಂದ ಮದುವೆಯಾಗಿದ್ದ ತನ್ನ ಪತಿ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆಂದು ಅರಿತುಕೊಂಡ ಜ್ಯೋತಿಶ್ವರಿ, ತನ್ನ ಗಂಡನ ಲ್ಯಾಪ್‌ಟಾಪ್ ಅನ್ನು ಒಮ್ಮೆ ಪರಿಶೀಲಿಸಿದಳು. ಈ ವೇಳೆ ಆತನಿಗೆ ಹಲವಾರು ಮಹಿಳೆಯರೊಂದಿಗೆ ಸಂಬಂಧವಿರುವುದು ಗೊತ್ತಾಗಿ ಶಾಕ್​ ಆಗಿದ್ದಳು. ಈ ಸಂದರ್ಭದಲ್ಲಿ, ಕೋಡಂಬಕ್ಕಂನಲ್ಲಿ ತನ್ನ ತಾಯಿಯ ಜತೆ ಇದ್ದ ಜ್ಯೋತಿಶ್ವರಿ, ತೀವ್ರ ದುಃಖವನ್ನು ತಡೆಯಲಾರದೇ ಪೆರುಂಗಲಥೂರ್‌ನಲ್ಲಿರುವ ತನ್ನ ಸಹೋದರಿಯ ಮನೆಗೆ ಹೋಗಿ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net