

ಎನ್.ಆರ್.ಪುರ: ಮಗುವಿಗೆ ತಾಯಿ ಹಾಲು ನೀಡುವುದರಿಂದ ಇಬ್ಬರ ಆರೋಗ್ಯಕ್ಕೂ ಒಳ್ಳೆಯದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ ಸಲಹೆ ನೀಡಿದರು.
ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗುವಾನಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೀಗುವಾನಿ ಶಾಂತಿ ಜ್ಞಾನವಿಕಾಸ ಕೇಂದ್ರದಲ್ಲಿ ನಡೆದ ಸೃಜನಶೀಲ ಕಾರ್ಯಕ್ರಮದಲ್ಲಿ ಮಹಿಳೆಯ ಅಪೌಷ್ಟಿಕತೆ ಹಾಗೂ ಮಧ್ಯವಯಸ್ಸಿನ ಮಹಿಳೆಯರ ಸಮಸ್ಯೆ ಬಗ್ಗೆ ಮಾತನಾಡಿದರು.
ಮಹಿಳೆಯರು ವೈಯಕ್ತಿಕ ಹಾಗೂ ಕುಟುಂಬದವರ ಆರೋಗ್ಯದ ಬಗ್ಗೆಯೂ ಗಮನ ನೀಡಬೇಕು. ಹೆಣ್ಣು ಮಕ್ಕಳು ಹರೆಯಕ್ಕೆ ಬಂದಾಗಲೇ ಆರೋಗ್ಯದ ಕಡೆ ಗಮನ ನೀಡಲು ಆರಂಭಿಸಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಗರ್ಭಿಣಿಯರಾದಾಗ ತಾಯಿಹಾಲಿನ ಮಹತ್ವ ತಿಳಿದುಕೊಳ್ಳಬೇಕು. ತಾಯಿಹಾಲಿನ ಮಹತ್ವದ ಬಗ್ಗೆ ಕುಟುಂಬದ ಎಲ್ಲರೂ ತಿಳಿದುಕೊಂಡಿರಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ ತಾಲೂಕು ಯೋಜನಾಧಿಕಾರಿ ನಿರಂಜನ ಮಾತನಾಡಿ, ಮಹಿಳೆಯರಿಗಾಗಿ ಜ್ಞಾನನಿಕಾಸ ಕೇಂದ್ರ ಹುಟ್ಟುಹಾಕಿದ್ದಾರೆ. ಪ್ರತಿ ತಿಂಗಳು ಮಾಹಿತಿ ಕಾರ್ಯಕ್ರಮ ನಡೆಯಲಿದ್ದು ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಉಪನ್ಯಾಸ ಏರ್ಪಡಿಸಲಾಗುವುದು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಅಧ್ಯಯನ ಪ್ರವಾಸ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ತಾಲೂಕು ಆಸ್ಪತ್ರೆ ವೈದ್ಯ ಡಾ. ನಿಶಾಲ್ ವಸಂತ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಅನ್ನಮ್ಮ, ಒಕ್ಕೂಟದ ಅಧ್ಯಕ್ಷೆ ಹೆಲನ್, ಕೈಮರ ವಲಯ ಮೇಲ್ವೀಚಾರಕ ತೀರ್ಥರಾಜ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ರಂಜಿತಾ, ಜ್ಞಾನವಿಕಾಸ ಕೇಂದ್ರದ ಸಂಯೋಜಿಕಿ ಪ್ರತಿಮಾ, ಸೇವಾ ಪ್ರತಿನಿಧಿ ಅಶ್ವಿನಿ, ಮಮತಾ ಇದ್ದರು.