ಬಿಸಿಯೂಟದ ಜತೆಗೆ ಬೆಳಗಿನ ಉಪಾಹಾರ; ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಫಾರಸು

bisi-oota
Published on

ನವದೆಹಲಿ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗಿನ್ನು ಮಧ್ಯಾಹ್ನದ ಬಿಸಿಯೂಟದ ಜತೆಗೆ ಬೆಳಗಿನ ಉಪಾಹಾರವೂ ಸಿಗಲಿದೆ. ಕೇಂದ್ರ ಸಂಪುಟ ಕಳೆದ ವಾರ ಅನುಮೋದನೆ ನೀಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗಿದೆ.

ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ಮಕ್ಕಳಲ್ಲಿ ವ್ಯಾಸಂಗಕ್ಕೆ ಉತ್ಸಾಹ ಮೂಡುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಬೆಳಗಿನ ಉಪಾಹಾರವನ್ನೂ ಸೇರಿಸುವಂತೆ ಶಿಫಾರಸು ಮಾಡಲಾಗಿದೆ. ಉಪಾಹಾರ ಒದಗಿಸಲು ಸಾಧ್ಯವಾಗದ ಸ್ಥಳಗಳಲ್ಲಿ ನೆಲಗಡಲೆ ಅಥವಾ ಬೆಲ್ಲ, ಸ್ಥಳೀಯವಾಗಿ ಸಿಗುವ ಹಣ್ಣುಗಳ ಮಿಶ್ರಣದ ಖಾದ್ಯಗಳನ್ನು ನೀಡಬಹುದು ಎಂದು ಸಲಹೆ ನೀಡಲಾಗಿದೆ.

ಎಲ್ಲ ಶಾಲಾ ಮಕ್ಕಳನ್ನು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ ಹಾಗೂ ಇದಕ್ಕಾಗಿ ಆರೋಗ್ಯ ಕಾರ್ಡ್​ಗಳನ್ನು ನೀಡುವಂತೆ ಶಿಫಾರಸು ಮಾಡಲಾಗಿದೆ. ಈ ನಡುವೆ, ಯಾವುದೇ ಭಾಷೆಯನ್ನು ರಾಜ್ಯಗಳ ಮೇಲೆ ಹೇರುತ್ತಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net