ಪುಸ್ತಕೋದ್ಯಮ ದಂಧೆಗೆ ಬ್ರೇಕ್: ಪ್ರಕಾಶಕರ ಮೇಲೆ ನಿಗಾ, ಗ್ರಂಥಾಲಯ ಪುಸ್ತಕ ಖರೀದಿಯಲ್ಲಿ ಬಿಗಿ

Books (1)
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದಲ್ಲಿ ಪುಸ್ತಕೋದ್ಯಮವನ್ನು ಸಕರಾತ್ಮಕವಾಗಿ ಬೆಳೆಸುವ ಉದ್ದೇಶ ಹೊಂದಿರುವ ಸರ್ಕಾರ, ಪ್ರಕಾಶಕರ ಮೇಲೂ ನಿಗಾವಹಿಸುವ ಮೂಲಕ ದಂಧೆಯಾಗದಂತೆ ಎಚ್ಚರವಹಿಸಲು ನಿರ್ಧರಿಸಿದೆ.

ರಾಜ್ಯದ ಗ್ರಂಥಾಲಯ ಇಲಾಖೆಗೆ ಪ್ರತಿ ವರ್ಷ ಕೋಟ್ಯಂತರ ರೂ.ಗಳ ಮೌಲ್ಯದ ಪುಸ್ತಕಗಳನ್ನು ಖರೀದಿ ಮಾಡುತ್ತದೆ. ಆದರೆ ಕೆಲವು ಪ್ರಕಾಶಕರು ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಂತಹವರನ್ನು ದೂರ ಮಾಡುವ ಮೂಲಕ ಅರ್ಹರಿಗೆ ಮನ್ನಣೆ ನೀಡಲು ಒಂದಷ್ಟು ಬಿಗಿ ಕ್ರಮಗಳಿಗೆ ಸರ್ಕಾರ ಮುಂದಾಗಿದೆ.

ಇತ್ತೀಚಿಗೆ ಪ್ರಕಾಶಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪುಸ್ತಕೋದ್ಯಮ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಗ್ರಂಥಾಲಯ ಇಲಾಖೆಗೆ ಒಂದಷ್ಟು ಸೂಚನೆ ನೀಡಿದ್ದಾರೆಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

ಪುಸ್ತಕ ಖರೀದಿ ಎರಡು ರೀತಿಯಲ್ಲಿ ನಡೆಯುತ್ತದೆ. ರಾಜ್ಯ ಸರ್ಕಾರದಿಂದ ಹಾಗೂ ಕೊಲ್ಕತ್ತದ ರಾಜರಾಮ್ ಮೋಹನ್​ರಾಯ್ ಸಂಸ್ಥೆಯ ನೆರವಿನಿಂದ ಸಹ ಖರೀದಿಯಾಗುತ್ತದೆ. ಖರೀದಿಗೆ ಪ್ರತ್ಯೇಕ ಆಯ್ಕೆ ಸಮಿತಿ ತಜ್ಞರ ನೇತೃತ್ವದಲ್ಲಿ ಇರುತ್ತದೆ. ಆದರೂ ದಂಧೆಯನ್ನು ತಡೆಗಟ್ಟಲು ಮಾತ್ರ ಸಾಧ್ಯವಾಗಿಲ್ಲ.

ಮೋಸ ಹೇಗೆ?: ಹಳೆಯ ಪುಸ್ತಕಗಳಿಗೆ ಮುಖಪುಟ ಬದಲಾವಣೆ ಮಾಡುವುದು, ಹೆಸರು ಬದಲಾವಣೆ ಮಾಡುವುದು ಹೀಗೆ ಅನೇಕ ರೀತಿಯಲ್ಲಿ ಮೋಸ ಮಾಡಿರುವ ಉದಾಹರಣೆಗಳಿವೆ. ತಪು್ಪ ಮಾಡಿ ಸಿಕ್ಕಿಕೊಂಡ ಪ್ರಕಾಶಕರನ್ನು ಇಲಾಖೆ ಕಪು್ಪಪಟ್ಟಿಗೆ ಸೇರಿಸಿದರೂ ಸಹ ಬೇರೆಂದು ಹೆಸರಿನಲ್ಲಿ ಅದೇ ಅದೇ ಚಾಳಿ ಮುಂದುವರೆಸುತ್ತ ಅರ್ಹ ಪ್ರಕಾಶಕರಿಗೂ ಮುಜುಗರವನ್ನುಂಟು ಮಾಡುತ್ತಿದ್ದಾರೆ. ಇಂತಹ ನಕಲಿಗಳು ಪುಸ್ತಕೋದ್ಯಮವನ್ನು ದಂಧೆ ಮಾಡಿಕೊಂಡಿದ್ದಾರೆ. ಅಂತಹವರಿಗೆ ಕಡಿವಾಣ ಹಾಕಲೇಬೇಕೆಂದು ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಂತಹ ಪ್ರಕಾಶಕರಿಗೆ ಸಹಾಯ ಮಾಡುವ ಅಧಿಕಾರಿಗಳ ವಿರುದ್ಧವೂ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆಂದು ಮೂಲಗಳು ಖಚಿತಪಡಿಸಿವೆ.

ಖರೀದಿಗೆ ಹಣ: ಈ ವರ್ಷ ಬಜೆಟ್​ನಲ್ಲಿ ಪುಸ್ತಕ ಖರೀದಿಗೆ ಕನಿಷ್ಠ 15 ಕೋಟಿ ರೂ.ಗಳನ್ನು ಮೀಸಲಿಡುವ ಸಾಧ್ಯತೆಗಳಿವೆ. ನಾಲ್ಕು ವರ್ಷಗಳಿಂದ ಖರೀದಿ ಆಗದೇ ಇರುವುದರಿಂದ ಇಷ್ಟು ದೊಡ್ಡ ಮೊತ್ತದ ಖರೀದಿ ಮಾಡುವ ಮೂಲಕ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಲು ಸರ್ಕಾರ ನಿರ್ಧರಿಸಿದೆ.

ತಲುಪಿಸಲು ಯತ್ನ: ಕೇವಲ ಪುಸ್ತಕ ಖರೀದಿ ಮಾತ್ರ ಮಾಡದೇ ಅವುಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿಯೂ ಯೋಜನೆ ರೂಪಿಸಲು ಇಲಾಖೆ ಸಿದ್ಧವಾಗುತ್ತಿದೆ. ಪಂಚಾಯಿತಿ ಗ್ರಂಥಾಲಯಗಳು, ವಾಚನಾಯಲಗಳನ್ನು ಸುಸಜ್ಜಿತವಾಗಿ ಮಾಡಲು ಯೋಜನೆ ಸಿದ್ಧವಾಗುತ್ತಿದೆ.

ಸೆಸ್ ಬಿಡುಗಡೆಗೆ ಸೂಚನೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆಯಲ್ಲಿ ಶೇ.6 ಗ್ರಂಥಾಲಯ ಸೆಸ್ ವಸೂಲಿ ಮಾಡುತ್ತವೆ. ಆದರೆ ಆ ಮೊತ್ತವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿವೆ ಹೊರತು ಗ್ರಂಥಾಲಯಕ್ಕೆ ನೀಡುತ್ತಿಲ್ಲ. ಬಿಬಿಎಂಪಿಯೊಂದೇ ಸುಮಾರು 600 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ. ಇತರೆ ಸ್ಥಳೀಯ ಸಂಸ್ಥೆಗಳದ್ದು ಸೇರಿಸಿದರೆ ಆ ಮೊತ್ತ ಒಂದು ಸಾವಿರ ಕೋಟಿ ರೂ.ಗಳ ಹತ್ತಿರ ಬಂದು ನಿಲ್ಲುತ್ತದೆ. ಇಷ್ಟು ಮೊತ್ತ ಒದಗಿಸಿದರೆ ಪುಸ್ತಕೋದ್ಯಮದ ಮೂಲಕ ಯುವ ಸಮುದಾಯಕ್ಕೆ ಓದುವ ಹವ್ಯಾಸವನ್ನು ಬೆಳೆಸಲು ಸಹಕಾರಿಯಾಗಲಿದೆ. ಗ್ರಂಥಾಲಯಕ್ಕೆ ಅಗತ್ಯ ಮೂಲಸೌಕರ್ಯವನ್ನು ಕಲ್ಪಿಸಬಹುದಾಗಿದೆ.

ಬಿಬಿಎಂಪಿಯ ಅಧಿಕಾರಿಗಳಿಗೆ ಗ್ರಂಥಾಲಯ ಸೆಸ್ ಕೂಡಲೇ ಬಿಡುಗಡೆ ಮಾಡುವಂತೆಯೂ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಅಧಿಕಾರಿಗಳು ಸಹ ಸಮ್ಮತಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.

ಏನೇನು ಲೋಪ?

  • ಮುದ್ರಣದಲ್ಲಿ ಗುಣಮಟ್ಟ ಕಾಪಾಡುತ್ತಿಲ್ಲ
  • ಹೆಸರು ಬದಲಾವಣೆ ಮಾಡಿ ಮುದ್ರಣ
  • ಮುಖಪುಟ ಮಾತ್ರ ಬದಲಾವಣೆ
  • ಬೇಕಾಬಿಟ್ಟಿ ದರ ನಿಗದಿ

ದಂಧೆ ತಡೆ ಹೇಗೆ

  • ಸರ್ಕಾರಕ್ಕೆ ಮೋಸ ಮಾಡುವ ಪ್ರಕಾಶಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ
  • ಪದೇಪದೆ ತಪ್ಪೆಸಗಿದರೆ ಜೈಲು ಶಿಕ್ಷೆ ವಿಧಿಸುವಂತೆ ಕಾಯ್ದೆ ರೂಪಿಸುವುದು
  • ಅಧಿಕಾರಿಗಳು, ಪ್ರಕಾಶಕರ ನಡುವಿನ ವ್ಯವಹಾರ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಕೆ
  • ಅಧಿಕಾರಿಗಳ ಮೇಲೂ ನಿಯಂತ್ರಣ
  • ಪ್ರತಿ ಪುಸ್ತಕಗಳ ಕೂಲಂಕಷ ಪರಿಶೀಲನೆ
  • ಕೇವಲ ಮೌಖಿಕ, ವೈಜ್ಞಾನಿಕ, ಜ್ಞಾನ ಪ್ರಸಾರದ ಪುಸ್ತಕಗಳಿಗೆ ಆದ್ಯತೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net