ಅನುದಾನ ಬಳಸದೆ ಯೋಜನೆಗಳಿಗೇ ಬ್ರೇಕ್!; ಪ್ರವಾಸಿ ಟ್ಯಾಕ್ಸಿಗೆ ಕೊಟ್ಟ 15 ಕೋಟಿಯಲ್ಲಿ ಬರೀ 8 ಕೋಟಿ ರೂ. ಖರ್ಚು

Taxi
Published on

| ದೇವರಾಜ್ ಕನಕಪುರ ಬೆಂಗಳೂರು

ಯಾವುದೇ ಯೋಜನೆಗೆ ದುಡ್ಡಿಲ್ಲ ಎನ್ನೋ ಇಲಾಖೆಗಳು ಸರ್ಕಾರ ನೀಡುವ ಅನುದಾನವನ್ನು ಸಮರ್ಪಕ ಬಳಕೆ ಮಾಡಿಕೊಳ್ಳುವಲ್ಲಿ ಸೋತಿವೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಅನುದಾನ ಕೊರತೆ ನೆಪದಲ್ಲಿ ‘ಪ್ರವಾಸಿ ಟ್ಯಾಕ್ಸಿ’ ಯೋಜನೆ ಸ್ಥಗಿತಗೊಳಿಸಿದೆ. ಆದರೆ, ಇದೇ ಯೋಜನೆಗೆ ನೀಡಿದ್ದ ಅನುದಾನವನ್ನು ಸದ್ಬಳಕೆ ಮಾಡಿಕೊಂಡಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

2019-20ರಲ್ಲಿ 15.72 ಕೋಟಿ ರೂ. ಬಿಡುಗಡೆ ಮಾಡಿದ್ದು, ಬಳಕೆಯಾಗಿರುವುದು ಮಾತ್ರ 8.88 ಕೋಟಿ ರೂ.. ಅರ್ಧಕ್ಕೆ ಅರ್ಧ ಬಳಕೆಯೇ ಆಗಿಲ್ಲ. ಇದರಲ್ಲಿ ಏಳು ಜಿಲ್ಲೆಗಳು ಒಂದು ನೈಯಾ ಪೈಸೆಯನ್ನೂ ಖರ್ಚು ಮಾಡಿಲ್ಲ ಎಂಬುದು ಗಮನರ್ಹ ಸಂಗತಿಯಾಗಿದೆ. 2019-20ನೇ ಸಾಲಿನಲ್ಲಿ 25.74 ಕೋಟಿ ರೂ. ಬಿಡುಗಡೆಯಾಗಿದ್ದು, 22.77 ಕೋಟಿ ರೂ. ಬಳಕೆ ಮಾಡಿದೆ. ಬಡ ಮತ್ತು ಹಿಂದುಳಿದ ವರ್ಗದವರ ಆದಾಯದ ಮೂಲವಾಗಿದ್ದ ಈ ಯೋಜನೆಯನ್ನು ಸರ್ಕಾರ ಅನುದಾನ ಕೊರತೆ ಎಂದು 2020-21ನೇ ಸಾಲಿನಿಂದ ಸ್ಥಗಿತ ಮಾಡಿದೆ. ಟ್ಯಾಕ್ಸಿ ನೀಡಿದ್ದರೆ, ಎಷ್ಟೋ ಜನರು ಜೀವನ ಅಸನಾಗುತ್ತಿತ್ತು. ನಮ್ಮ ರಾಜ್ಯದಲ್ಲಿ ಟ್ಯಾಕ್ಸಿ ಮೂಲಕ ಜೀವನ ಸಾಗಿಸುವವರ ಸಂಖ್ಯೆಗೇನು ಕಡಿಮೆ ಇಲ್ಲ.

ಅನುದಾನ ಬಳಕೆ: 2019-20ರಲ್ಲಿ 31 ಜಿಲ್ಲೆಗಳಿಗೆ 15.72 ಕೋಟಿ ರೂ. ಬಿಡುಗಡೆ ಮಾಡಿದೆ. ಬಳಕೆಯಾಗಿರುವುದು ಮಾತ್ರ 8.88 ಕೋಟಿ ರೂ. ಇದರಲ್ಲಿ ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರಗಳಲ್ಲಿ ಅನುದಾನ ಬಳಕೆಯೇ ಆಗಿಲ್ಲ. ಇನ್ನೂ ಬಹುತೇಕ ಜಿಲ್ಲೆಗಳಲ್ಲಿ ಅರ್ಧಕ್ಕೆ ಅರ್ಧ ಮಾತ್ರ ಅನುದಾನ ಬಳಕೆ ಮಾಡಲಾಗಿದೆ. ಬೆಂಗಳೂರು ನಗರಕ್ಕೆ 91 ಲಕ್ಷ ಬಿಡುಗಡೆ ಮಾಡಿದರೆ, ಬಳಕೆ ಮಾಡಿರುವುದು ಮಾತ್ರ 30 ಲಕ್ಷ ರೂ. ಹಾವೇರಿಗೆ 54 ಲಕ್ಷ ನೀಡಿದರೆ, 27 ಲಕ್ಷ ಖರ್ಚು ಮಾಡಿದೆ.

ಏನಿದು ಪ್ರವಾಸಿ ಟ್ಯಾಕ್ಸಿ?: ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಆಯ್ಕೆಗೊಳ್ಳುವ ಫಲಾನುಭವಿಗಳಿಗೆ ತಲಾ 2ರಿಂದ 3 ಲಕ್ಷ ರೂ. ಗಳನ್ನು ಪ್ರವಾಸೋದ್ಯಮ ಇಲಾಖೆ ಸಹಾಯಧನ ರೂಪದಲ್ಲಿ ನೀಡಲಿದೆ. ವಾಹನ ಬೆಲೆಯ ಶೇ. 50 ಮೊತ್ತವನ್ನು ಆಯ್ಕೆಯಾದ ಅಭ್ಯರ್ಥಿಗಳು ಭರಿಸಬೇಕು. ಉಳಿದ ಮೊತ್ತವನ್ನು ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕ್, ಸಹಕಾರಿ ಬ್ಯಾಂಕ್​ಗಳ ಮೂಲಕ ಸಾಲವನ್ನು ಫಲಾನುಭವಿ ಪಡೆದುಕೊಳ್ಳಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ತಮಗೆ ವಿತರಿಸುವ ಪ್ರವಾಸಿ ವಾಹನವನ್ನು ಯಾರಿಗೂ ಪರಭಾರೆ ಮಾಡುವುದಿಲ್ಲವೆಂದು ನೋಟರಿಯಿಂದ ಪ್ರಮಾಣೀಕರಿಸಿ ಇಲಾಖೆಗೆ ನೀಡಬೇಕಾಗಿರುತ್ತದೆ.

ಟ್ಯಾಕ್ಸಿ ಕೊಡಿ ಸ್ವಾಮಿ: 2019-20ನೇ ಸಾಲಿನಲ್ಲಿ ‘ಪ್ರವಾಸಿ ಟ್ಯಾಕ್ಸಿ’ ಅರ್ಜಿ ಆಹ್ವಾನಿಸಿ, ಅಂತಿಮ ಪಟ್ಟಿ ಸಿದ್ಧಪಡಿಸಿದ್ದರೂ ಈವರೆಗೆ ಅನುದಾನ ನೀಡದೆ ಇರುವುದರಿಂದ ಫಲಾನುಭವಿಗಳಿಗೆ ಟ್ಯಾಕ್ಸಿ ಸಿಗದಂತಾಗಿದೆ. ಎರಡು ವರ್ಷಗಳೇ ಕಳೆದರೂ, ಈವರೆಗೆ ಟ್ಯಾಕ್ಸಿ ಸಿಕ್ಕಿಲ್ಲ. ಇಲಾಖೆಯನ್ನು ಕೇಳಿದರೆ, ಅನುದಾನ ನೀಡಿದರೆ, ಟ್ಯಾಕ್ಸಿ ಬಿಡುಗಡೆ ಮಾಡುತ್ತೇವೆಂದು ಹೇಳುತ್ತಾರೆ. ಆದರೆ, ಈವರೆಗೂ ಅನುದಾನ ಬಿಡುಗಡೆಯಾಗಿಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ. ಯಾವುದೇ ಯೋಜನೆ, ಅರ್ಧಕ್ಕೆ ಹೇಗೆ ನಿಂತು ಹೋಗುತ್ತದೆ?. ಅಂತಿಮ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಅನುದಾನ ನೀಡಿ ಆನಂತರ ಯೋಜನೆ ಸ್ಥಗಿತ ಮಾಡಬೇಕಲ್ಲವೇ? ಅರ್ಧದಲ್ಲೇ ಸ್ಥಗಿತ ಮಾಡುವುದು ಸರಿ ಇಲ್ಲ. ಆಯ್ಕೆಯಾಗಿರುವವರಿಗೆ ಟ್ಯಾಕ್ಸಿ ನೀಡಬೇಕೆಂದು ಆಕಾಂಕ್ಷಿಗಳು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net