ಗುಂಡೇಟಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷನೇ ಬಲಿ; 12 ಜನರ ತಂಡದಿಂದ ಬೇಟೆ

Village Panchayath
Published on

ತೀರ್ಥಹಳ್ಳಿ: ಶಿಕಾರಿಗೆ ತೆರಳಿದ್ದ ವೇಳೆ ಬೇಟೆಗಾರರು ಹಾರಿಸಿದ ಗುಂಡು ತಗುಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶನಿವಾರ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ನೊಣಬೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಾಂತರಾಜ್ (46) ಮೃತರು.

ಶನಿವಾರ ತಾಲೂಕಿನ ನೊಣಬೂರು ಮತ್ತು ಅರಳಿಸುರುಳಿ ವ್ಯಾಪ್ತಿಯ ಅಂಬುತೀರ್ಥದ ಸಮೀಪ 12 ಮಂದಿ ಕಾಡುಪ್ರಾಣಿ ಶಿಕಾರಿಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ್ದು ಕಾಂತರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಕ್ಷಣವೇ ಅವರನ್ನು ಅಂಬುತೀರ್ಥದ ಸಮೀಪದಿಂದ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಕರೆದೊಯ್ದಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಜೆಸಿ ಆಸ್ಪತ್ರೆಗೆ ಧಾವಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಘಟನೆಯ ಕುರಿತು ಮಾಹಿತಿ ಪಡೆದರು. ಕಾಂತರಾಜ್ ಅವಿವಾಹಿತನಾಗಿದ್ದು ಕೆಲ ದಿನಗಳ ಹಿಂದೆ ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರದಲ್ಲಿ ತರಬೇತಿ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net