

| ರಾಘವ ಶರ್ಮ ನಿಡ್ಲೆ, ನವದೆಹಲಿ
ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಬಿಜೆಪಿ ಪಕ್ಷ ಹಿಂದುತ್ವ ಮತ್ತು ಪ್ರಧಾನಿ ನರೇಂದ್ರ ಮೋದಿ ಹೆಸರನ್ನೇ ಮುಂದಿಟ್ಟುಕೊಂಡು ಮತ ಕೇಳುವ ಲೆಕ್ಕಾಚಾರದಲ್ಲಿರುವುದರಿಂದ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ರಾಜ್ಯದ ಸಣ್ಣ ಸಣ್ಣ ಸಮುದಾಯಗಳನ್ನು ಗುರಿಯಾಗಿಸಿ, ಅವರಲ್ಲಿ ಕಾಂಗ್ರೆಸ್ ಬಗ್ಗೆ ಭರವಸೆ ಮೂಡುವಂತೆ ತಂತ್ರಗಾರಿಕೆ ರೂಪಿಸಲು ಗಂಭೀರ ಚಿಂತನೆ ನಡೆದಿದೆ.
ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸಮ್ಮುಖದಲ್ಲಿ ರಾಜ್ಯ ಕಾಂಗ್ರೆಸ್ನ 37 ನಾಯಕರೊಂದಿಗೆ ನಡೆದ ಲೋಕಸಭೆ ಚುನಾವಣೆ ಕುರಿತ ಚಿಂತನ-ಮಂಥನದಲ್ಲಿ ಈ ಚರ್ಚೆಯಾಗಿದೆ. ಬಿಜೆಪಿಯ ಹಿಂದುತ್ವದ ಅಜೆಂಡಾ ಚುನಾವಣೆ ಗೆಲ್ಲಲು ಮಾತ್ರ. ಸಣ್ಣ ಸಮುದಾಯಗಳು ಈಗಲೂ ಸಂಕಷ್ಟದಲ್ಲಿದ್ದು, ಈ ಸಮುದಾಯಗಳ ಯುವಕರ ಭವಿಷ್ಯ ಹಾಗೂ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳಲು ಕಾರ್ಯಕ್ರಮ ರೂಪಿಸಬೇಕು ಎಂದು ಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಸಲಹೆ ನೀಡಿದ್ದಾರೆ. ಈ ಅಭಿಪ್ರಾಯಕ್ಕೆ ಸಚಿವರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಸೇರಿ ಹಲವರು ಬೆಂಬಲ ವ್ಯಕ್ತಪಡಿಸಿದರು. ಹೀಗಾಗಿ ನಿರ್ಲಕ್ಷಿತ, ಶೋಷಿತ ಸಮುದಾಯಗಳತ್ತ ದೃಷ್ಟಿ ನೆಡಲು ಉದ್ದೇಶಿಸಲಾಗಿದೆ. ಬಿಜೆಪಿಯ ಕೋಮುವಾದಕ್ಕೆ ಸಣ್ಣ ಜಾತಿಗಳ ಅಭಿವೃದ್ಧಿಯ ಪ್ರತಿವಾದ ನಮ್ಮದಾಗಿರಬೇಕು ಎನ್ನುವ ಒಮ್ಮತಾಭಿಪ್ರಾಯ ವ್ಯಕ್ತವಾಗಿದೆ.
ರಾಜ್ಯದಲ್ಲಿ ಅಭೂತಪೂರ್ವ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ 15-20 ಸೀಟುಗಳನ್ನು ಗೆಲ್ಲಲೇಬೇಕೆಂಬ ಗುರಿ ವರಿಷ್ಠರದ್ದು. ಅಂತೆಯೇ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ 20 ಸೀಟುಗಳನ್ನು ಗೆಲ್ಲಲು ಯಾವುದೇ ಸಮಸ್ಯೆಯಿಲ್ಲ. ಅದರೆ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ನಾಯಕನಿಲ್ಲದ ಪಾರ್ಟಿ: ಬಿಜೆಪಿ ತೊರೆದು ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಭೆಯಲ್ಲಿ ಮಾತನಾಡಿ, ರಾಜ್ಯ ಬಿಜೆಪಿ ನಾಯಕನಿಲ್ಲದ ಪಕ್ಷವಾಗಿದೆ. ಸಂಘಟನೆ ದುರ್ಬಲಗೊಂಡಿದೆ. ಅವರನ್ನು ಮತ್ತಷ್ಟು ದುರ್ಬಲಗೊಳಿಸುವ ಅವಕಾಶ ನಮ್ಮ ಮುಂದಿದೆ. ಅವರ ಬಳಿ ಯಾವುದೇ ವಿಚಾರವಿಲ್ಲ, ಮೋದಿಯನ್ನಷ್ಟೇ ನಂಬಿಕೊಂಡಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಲು ನಾವು ಮುಂದಾಗಬೇಕು ಎಂದು ಹೇಳಿದ್ದಾರೆ.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ: ಎಲ್ಲರೂ ಅಭಿಪ್ರಾಯಗಳನ್ನು ಮಂಡಿಸಿದ ಬಳಿಕ ರಾಹುಲ್ ಗಾಂಧಿ ರಾಜ್ಯ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದು, ಸರ್ಕಾರಕ್ಕೆ ಭ್ರಷ್ಟಾಚಾರದ ಕಳಂಕ ಮೆತ್ತಿಕೊಳ್ಳದಂತೆ ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಭ್ರಷ್ಟರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಡಿ. ಈ ಬಗ್ಗೆ ನಿಮ್ಮೆಲ್ಲರಲ್ಲೂ ಜಾಗೃತೆ ಇರಲಿ. ನೀವು ಭ್ರಷ್ಟಾಚಾರ ಮಾಡಿದ್ದೀರಿ ಎಂದು ನಾನು ಹೇಳುತ್ತಿಲ್ಲ. ಅಧಿಕಾರ ಕೈಯಲ್ಲಿದ್ದಾಗ ಅವ್ಯವಹಾರದ ಆರೋಪಗಳು ಬರುವುದು ಸಹಜ. ಹೀಗಾಗಿ ನಮ್ಮದು ಭ್ರಷ್ಟಚಾರಮುಕ್ತ ಸರ್ಕಾರ ಎಂಬ ಅಭಿಪ್ರಾಯ ಗಟ್ಟಿಯಾಗಬೇಕು. ರಾಜ್ಯ ಬಿಜೆಪಿ ನಾಯಕರ ಬಗ್ಗೆ ಜನರಲ್ಲಿರುವ ಅಸಮಾಧಾನ, ಅತೃಪ್ತಿ ಮತ್ತಷ್ಟು ಹೆಚ್ಚಾಗುವಂತೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಮೋದಿ ಮುಖ ನೋಡಿ ವೋಟ್ ಹಾಕ್ತಾರೆ!: ರಾಜ್ಯ ಬಿಜೆಪಿ ನಾಯಕರ ಬಗ್ಗೆ ಕರ್ನಾಟಕದ ಜನತೆಗೆ ಸಮಾಧಾನವಿಲ್ಲ. ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರದ ಮೇಲಿನ ಆಕ್ರೋಶವೂ ಕೂಡ ನಮಗೆ ಲಾಭವಾಗಿ ಪರಿಣಮಿಸಿತ್ತು. ಆದರೆ, ವಿಧಾನಸಭೆ ಚುನಾವಣೆಯೇ ಬೇರೆ. ಲೋಕಸಭೆ ಚುನಾವಣೆಯೇ ಬೇರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕಿದ ಎಷ್ಟೋ ಮಂದಿ ಮೋದಿ ದೇಶದ ನಾಯಕರಾಗಬೇಕು ಎಂದು ಲೋಕಸಭೆಯಲ್ಲಿ ಬಿಜೆಪಿಗೆ ಮತ ಹಾಕಬಹುದು. ಕರ್ನಾಟಕದಲ್ಲಿ ಇಂಥ ವಾತಾವರಣ ಇದ್ದಿದ್ದನ್ನು ನಾವು ನೋಡಿದ್ದೇವೆ. ಮೋದಿಗಾಗಿ ವೋಟ್ ಹಾಕೋಣ. ಅವರು ದೇಶಕ್ಕೋಸ್ಕರ ಹಗಲಿರುಳು ಕೆಲಸ ಮಾಡ್ತಾರೆ ಎಂಬ ಅಭಿಪ್ರಾಯ ಜನರಲ್ಲಿ ಗಟ್ಟಿಯಾದರೆ ಕಾಂಗ್ರೆಸ್ಗೆ ಕಷ್ಟವಾಗಲಿದೆ. ಹೀಗಾಗಿ, ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿದು ಜನರಿಗೆ ವಾಸ್ತವ ಮನವರಿಕೆ ಮಾಡಬೇಕು ಎಂದು ಸಭೆಯಲ್ಲಿ ಚರ್ಚೆಯಾಗಿದೆ.
ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಶುದ್ಧ ಸುಳ್ಳು. ಉಚಿತವಾಗಿಯೂ ನೀಡುತ್ತೇವೆ, ಅಭಿವೃದ್ಧಿಯನ್ನೂ ಮಾಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ 20ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲಲಿದ್ದೇವೆ. ಪ್ರಣಾಳಿಕೆಯಲ್ಲಿ ತಿಳಿಸಿದ 76 ಭರವಸೆಗಳನ್ನು ಜಾರಿ ಮಾಡಿದ್ದೇವೆ. | ಸಿದ್ದರಾಮಯ್ಯ, ಮುಖ್ಯಮಂತ್ರಿ
ಬಹಿರಂಗವಾಗಿ ಕಿತ್ತಾಟ ಬೇಡ: ಯಾರ ಬಗ್ಗೆ ಏನೇ ಅಸಮಾಧಾನ ಗಳಿದ್ದರೂ, ಅದನ್ನು ಮಾಧ್ಯಮದ ಮುಂದೆ ಮಾತನಾಡುತ್ತ ಆಂತರಿಕ ಸಮಸ್ಯೆಗಳನ್ನು ಬಹಿರಂಗಪಡಿಸುವುದು ಬೇಡ. ಏನೇ ಸಮಸ್ಯೆಯಾಗಿದ್ದರೂ ಹೈಕಮಾಂಡ್ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ ಎಂದು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ. ಪಕ್ಷದ ಹಿರಿಯರು ಅಥವಾ ಕಿರಿಯರೇ ಆಗಿರಲಿ. ಮೀಡಿಯಾ ಮುಂದೆ ಅನವಶ್ಯಕವಾಗಿ ಮಾತನಾಡುವ ಅಗತ್ಯವಿಲ್ಲ. ಇದರಿಂದ ನಮ್ಮ ದೌರ್ಬಲ್ಯಗಳನ್ನೇ ಬಹಿರಂಗಪಡಿಸಿಕೊಂಡಂತಾಗುತ್ತದೆ. ಪಕ್ಷದ ಆಂತರಿಕ ವೇದಿಕೆಗಳನ್ನು ಬಳಸಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಅವರು ಕಿವಿಮಾತು ಹೇಳಿದ್ದಾರೆ.
ಮತ ಗಳಿಕೆ ಪ್ರಮಾಣ ಉಳಿಸಿಕೊಳ್ಳಲು ತಂತ್ರ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.43 ಮತ ಗಳಿಕೆ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಈ ಪ್ರಮಾಣ ಕಡಿಮೆಯಾಗಬಾರದು. ಬಿಜೆಪಿ ತನ್ನ ಶೇ.36 ಮತ ಪ್ರಮಾಣ ಉಳಿಸಿಕೊಂಡಿದೆ. ಈ ಬಾರಿ ಜೆಡಿಎಸ್ ಮತಗಳು ಕಾಂಗ್ರೆಸ್ಗೆ ಬಿದ್ದಿವೆ. ಈ ಮತಗಳು ಬಿಜೆಪಿಗೆ ವರ್ಗಾವಣೆಯಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಗಂಭೀರ ಚಿಂತನೆ ನಡೆಸಿ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ವೋಟ್ ಶೇರ್ ಕಡಿಮೆಯಾದಲ್ಲಿ ಅದರ ಲಾಭ ಬಿಜೆಪಿಗೆ. ಇದನ್ನು ತಪ್ಪಿಸಲು ನಾವು ತಂತ್ರ ಹೆಣೆಯಬೇಕಿದೆ ಎಂದೂ ಹಿರಿಯ ನಾಯಕರು ಸಭೆಯಲ್ಲಿ ಸಲಹೆ ನೀಡಿದ್ದಾರೆ.
ಫಲಾನುಭವಿಗಳ ಸಮಾವೇಶ: ಗ್ಯಾರಂಟಿಗಳನ್ನು ಜಾರಿ ಮಾಡಿ ಸುಮ್ಮನಿರುವ ಬದಲು, ಪ್ರತಿ ಜಿಲ್ಲೆಯಲ್ಲೂ ಫಲಾನುಭವಿಗಳ ಸಮಾ ವೇಶ ನಡೆಸಬೇಕು. ಆ ಮೂಲಕ ಫಲಾನು ಭವಿಗಳಲ್ಲಿ ಸರ್ಕಾರದ ಬಗ್ಗೆ ತೃಪ್ತಿಕರ ಭಾವನೆ ಗಟ್ಟಿ ಗೊಳಿಸಬೇಕು. ಗ್ಯಾರಂಟಿ ಯೋಜನೆ ಯಾರೂ ವಿರೋಧಿಸುತ್ತಿಲ್ಲ. ಹೀಗಿ ರುವಾಗ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಅಭಿಪ್ರಾಯ ಮೂಡಲು ಸಮಾವೇಶ ಅಗತ್ಯ ಎಂದು ರ್ಚಚಿಸಲಾಗಿದೆ.