ಬ್ರಾಹ್ಮಣ ಮಹಾ ಸಮ್ಮೇಳನ 18ರಿಂದ

Published on

ಹುಬ್ಬಳ್ಳಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಜ. 18 ಹಾಗೂ 19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಬ್ರಾಹ್ಮಣ ಮಹಾ ಸಮ್ಮೇಳನಕ್ಕೆ ಧಾರವಾಡ ಜಿಲ್ಲೆಯಿಂದ 2,500ಕ್ಕೂ ಹೆಚ್ಚು ವಿಪ್ರರು ಭಾಗವಹಿಸುವರು ಎಂದು ಮಹಾಸಭಾ ಉಪಾಧ್ಯಕ್ಷ ಎ.ಸಿ. ಗೋಪಾಲ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ 15 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಹಾಸಭಾ ಮತ್ತೊಬ್ಬ ಉಪಾಧ್ಯಕ್ಷ ಹನುಮಂತ ಡಂಬಳ ಮಾತನಾಡಿ, 1974ರಲ್ಲಿ ಸ್ಥಾಪಿತವಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ 50 ವರ್ಷವಾಗಿದ್ದು, ಸುವರ್ಣ ಮಹೋತ್ಸವ ಆಚರಿಸುತ್ತಿದೆ. ಈ ನಿಟ್ಟಿನಲ್ಲಿ ಮಹಾ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನೀರಿಕ್ಷೆ ಇದೆ ಎಂದರು.

ಸಮ್ಮೇಳನದಲ್ಲಿ ವಾಣಿಜ್ಯ ಮಳಿಗೆಗಳು, ಪಾಕೋತ್ಸವ, ಗೋಷ್ಠಿಗಳು, ಉದ್ಯೋಗ ಮೇಳ, ಆಲೆಮನೆ ಪ್ರಾತ್ಯಕ್ಷಿಕೆ, ಅಗ್ನಿಹೋತ್ರಿಗಳಿಗೆ ಗೌರವ ಮತ್ತು ಅಗ್ನಿಹೋತ್ರ ಪ್ರಾತ್ಯಕ್ಷಿಕೆ, ಕಂಕಣ ಭಾಗ್ಯಕ್ಕೊಂದು ಪಾಣಿಗ್ರಾಹಿ ವಿವಾಹ ವೇದಿಕೆ, ಶೋಭಾ ಯಾತ್ರೆ ಹಾಗೂ ಸಾಂಸ್ಕೃತಿಕ ಮಂಟಪದಲ್ಲಿ ಸಾಂಸ್ಕೃತಿಕ ಕಲಾ ವೈಭವಗಳು ಮೇಳೈಸಲಿವೆ. ಈ ಎಲ್ಲ ಕಾರ್ಯಕ್ರಮಗಳು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರ ನೇತೃತ್ವದಲ್ಲಿ ಜರುಗಲಿವೆ ಎಂದರು.

ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ, ಶ್ರೀ ಪುರುಷೋತ್ತಮ ಭಾರತೀ ಸ್ವಾಮೀಜಿ, ಶ್ರೀ ಅದ್ವೈತಾನಂದ ಭಾರತೀ ಸ್ವಾಮೀಜಿ, ಸೇರಿದಂತೆ ವಿವಿಧ ರಾಜ್ಯದ ಮುಖ್ಯಮಂತ್ರಿ, ಸಂಸದರು ಇತರರು ಪಾಲ್ಗೊಳ್ಳುವರು ಎಂದರು.

ರಾಜ್ಯ ಸಂಚಾಲಕ ಬಿಂದುಮಾಧವ ಪುರೋಹಿತ, ಜಿಲ್ಲಾ ಸಂಚಾಲಕರಾದ ಮನೋಹರ ಪರ್ವತಿ, ಶಂಕರ ಪಾಟೀಲ, ವಿಜಯ ನಾಡಜೋಶಿ, ಕೇಶವ ಬಾದ್ನಟ್ಟಿ, ನರಸಿಂಹ ಕೊತ್ವಾಲ್, ಸಂಜೀವ ಕುಲಕರ್ಣಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net