

ಆನಂದಪುರ: ಬ್ರಹ್ಮಶ್ರೀ ನಾರಾಯಣ ಗುರುಗಳು ಮನುಷ್ಯ ಜನ್ಮ ಶ್ರೇಷ್ಠ ಹಾಗೂ ಸಮನ್ವಯದ ಬದುಕು ಅಗತ್ಯ ಪ್ರತಿಪಾದಿಸಿದ್ದರು. ಇದು ಸಾರ್ವಕಾಲಿಕ ಸತ್ಯ ಎಂದು ಆರ್ಯ ಈಡಿಗ ಸಂಘದ ಅಧ್ಯಕ್ಷ ಎಚ್.ಎಂ.ಬಸವರಾಜ್ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ನಾರಾಯಣ ಗುರುಗಳ 170ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯರೆಲ್ಲರೂ ಒಂದೇ ಜಾತಿ, ಒಂದೇ ಕುಲ, ಒಂದೇ ಮತವೆಂದು ಸಾರಿದ್ದರು ಎಂದರು.
ಮೇಲು-ಕೀಳು ಭಾವನೆ ಹೋಗಲಾಡಿಸಲು ಪ್ರಯತ್ನಿಸಿದ್ದರು. ಹಾಗಾಗಿ ಅವರನ್ನು ಇಂದಿಗೂ ಆರಾಧಿಸಲಾಗುತ್ತಿದೆ. ಸಂಘಕ್ಕೆ ಶಾಶ್ವತ ಸಭಾ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಸೂಕ್ತ ಸ್ಥಳ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಉಮಾಪತಿ ಭೈರಾಪುರ ಮಾತನಾಡಿ, ಮುಂದಿನ ದಿನಗಳಲ್ಲಿ ಹೋಬಳಿಯಲ್ಲಿ ಸಾಮಾಜಿಕ ಕಾರ್ಯಗಳನ್ನು ನಡೆಸಲಾಗುವುದು ಎಂದರು.
ಸಹ ಕಾರ್ಯದರ್ಶಿ ಹಿರಣ್ಯಪ್ಪ, ಉಪಾಧ್ಯಕ್ಷ ನಾರಿ ಲೋಕಪ್ಪ, ಪದಾಧಿಕಾರಿಗಳಾದ ಮುಕುಂದ, ಟಾಕಪ್ಪ, ಮಂಜುನಾಥ, ರಮಾನಂದ ಸಾಗರ್, ರಾಮಚಂದ್ರ ಇತರರಿದ್ದರು.