ಸಹೋದ್ಯೋಗಿಯನ್ನ ಬರ್ಬರವಾಗಿ ಕೊಂದ BPO ಉದ್ಯೋಗಿ; ಕಾರಣ ಕೇಳಿದ್ರೆ ನೀವು ಹೌಹಾರೋದಂತು ಗ್ಯಾರಂಟಿ

Pune BPO Murder
Published on

ಪುಣೆ: ಆಘಾತಕಾರಿ ಘಟನೆಯೊಂದರಲ್ಲಿ ಕಾಲ್​ಸೆಂಟರ್ ಉದ್ಯೋಗಿಯೋರ್ವ (BPO Employee) ತನ್ನ ಸಹೋದ್ಯೋಗಿಯನ್ನೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಘಟನೆಯು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಆರೋಪಿ ಕೊಲೆ ಮಾಡುತ್ತಿರುವ ಭೀಕರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಮೃತರನ್ನು ಶುಭದಾ ಶಂಕರ ಕೊಡಾರೆ (28) ಎಂದು ಗುರುತಿಸಲಾಗಿದ್ದು, ಘಟನೆಯು ಜನವರಿ 07ರಂದು ನಡೆದಿರುವುದಾಗಿ ವರದಿಯಾಗಿದೆ. ಆರೋಪಿಯನ್ನು ಶಿವಾಜಿನಗರ ನಿವಾಸಿ ಕೃಷ್ಣ ಸತ್ಯನಾರಾಯಣ ಕನೋಜ (30) ಎಂದು ಗುರುತಿಸಲಾಗಿದ್ದು, ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 

ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿ ಕೃಷ್ಣನಿಂದ ಮೃತ ಮಹಿಳೆ ಶುಭದಾ ತನ್ನ ತಂದೆಗೆ ಹುಷಾರಿಲ್ಲ ಎಂದು ಹೇಳಿ 3-4 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದರು. ಕೃಷ್ಣ ಅದನ್ನು ವಾಪಸ್​ ಕೇಳಿದ್ದು, ಆಕೆ ತನ್ನ ತಂದೆ ಇನ್ನೂ ಹುಷಾರಾಗಿಲ್ಲ ಎಂದು ಸಬೂಬು ಹೇಳಿ ಹಣವನ್ನು ವಾಪಸ್​ ಕೊಟ್ಟಿರಲಿಲ್ಲ.

ಶುಭದಾ ಕಾರಣಗಳನ್ನು ಕೇಳಿ ಅನುಮಾನಗೊಂಡ ಆರೋಪಿ ಕೃಷ್ಣ ಆಕೆ ತವರೂರಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದು, ಆಕೆ ಸುಳ್ಳು ಹೇಳಿ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಆ ಬಳಿಕ ಜನವರಿ 07ರಂದು ಆರೋಪಿಯು ಆಕೆಯನ್ನು ಪಾರ್ಕಿಂಗ್​ ಲಾಟ್​ಗೆ ಕರೆಸಿಕೊಂಡು ಸತ್ಯಾಂಶವನ್ನ ಹೇಳಿ ತನ್ನ ಹಣವನ್ನ ವಾಪಸ್​ ನೀಡುವಂತೆ ಹೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿಯಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆರೋಪಿ ಮಚ್ಚಿನಿಂದ ಯುವತಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಗಾಯಾಳುವನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಅಧಿಕ ರಕ್ತಸ್ರಾವವಾಗಿದ್ದರಿಂದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ಧಾಳೆ. ತಲೆಮಾರಿಸಿಕೊಂಡಿರುವ ಆರೋಪಿಯನ್ನು ಹುಡುಕಾಡಲು ವಿಶೇಷ ತಂಡವನ್ನು ರಚಿಸಲಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net