

ಉಳ್ಳಾಲ (ದ.ಕ.): ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಉಚ್ಚಿಲಗುಡ್ಡೆ ಎಂಬಲ್ಲಿ ಗಂಟಲಲ್ಲಿ ಚಾಕಲೆಟ್ ಸಿಲುಕಿಕೊಂಡ ಪರಿಣಾಮ ಎಂಟು ವರ್ಷದ ಬಾಲಕ ಭಾನುವಾರ ಮೃತಪಟ್ಟಿದ್ದಾನೆ.
ಉಚ್ಚಿಲ ನಿವಾಸಿ ಅಬ್ದುಲ್ ರಹೀಮ್ ಎಂಬುವರ ಪುತ್ರ ಫೈಝಾನ್ ಮೃತ ಬಾಲಕ. ಶನಿವಾರ ರಾತ್ರಿ ಅಂಗಡಿಗೆ ಹೋಗಿದ್ದ ಆತ ಹಿಂದಿರುಗಿ ಬರುವಾಗ ಚಾಕಲೆಟ್ ತಿಂದಿದ್ದಾನೆ. ಕೆಲವೇ ಹೊತ್ತಿನಲ್ಲಿ ಗಂಟಲಲ್ಲಿ ಸಮಸ್ಯೆ ಎದುರಾಗಿ, ಆಸ್ಪತ್ರೆಗೆ ಕೊಂಡೊಯ್ಯುವ ಮೊದಲೇ ಮೃತಪಟ್ಟಿದ್ದಾನೆ.
ಶ್ವಾಸಕೋಶದಲ್ಲಿ ಸಮಸ್ಯೆ ಎದುರಾಗಿದ್ದೇ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ರಹೀಮ್ ಅವರ ಇಬ್ಬರು ಗಂಡು ಮಕ್ಕಳ ಪೈಕಿ ಫೈಝಾನ್ ದೊಡ್ಡವನು. ವಿದೇಶದಲ್ಲಿ ಕೆಲಸದಲ್ಲಿದ್ದ ರಹೀಂ ಲಾಕ್ಡೌನ್ ಹಿನ್ನೆಲೆಯಲ್ಲಿ ಊರಿನಲ್ಲೇ ಇದ್ದಾರೆ.