ಬಾಲಕರನ್ನೂ ಬಿಡುವುದಿಲ್ಲ ಕಾಮುಕರು; ಶೇ. 17 ಲೈಂಗಿಕ ದೌರ್ಜನ್ಯ ಬಾಲಕರ ಮೇಲೆಯೇ!

boys
Published on

ತಿರುವನಂತಪುರಂ: ಬರೀ ಹೆಣ್ಣು ಮಕ್ಕಳಲ್ಲ, ಗಂಡು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯವೆಸಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ವರದಿಯೊಂದರ ಪ್ರಕಾರ ಕೇರಳದಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯಗಳಲ್ಲಿ ಶೇ. 17 ದೌರ್ಜನ್ಯಗಳು ಬಾಲಕರ ಮೇಲೇ ನಡೆದಿರುವುದು.

ಮಹಿಳಾ ಪೊಲೀಸ್​ ಬೆಟಾಲಿಯನ್​ನ ಕಮಾಂಡೆಂಟ್​ ಆರ್​​ ನಿಶಾಂತಿಣಿ ಈ ವರದಿಯನ್ನು ತಯಾರಿಸಿದ್ದಾರೆ. 2015ರಿಂದ 2019ರವರೆಗೆ ಕೇರಳ ರಾಜ್ಯವೊಂದರಲ್ಲಿ ಮಕ್ಕಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಗಳ ಪಟ್ಟಿ ಆಧಾರಿಸಿ ವರದಿ ತಯಾರಿಸಲಾಗಿದೆ. ಈ ಅವಧಿಯಲ್ಲಿ 13,184 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 1,150 ಪ್ರಕರಣಗಳು ಬಾಲಕರ ಮೇಲೆ ನಡೆದಿರುವ ಲೈಂಗಿಕ ಹಿಂಸಾಚಾರದ್ದು.

ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಶೇ. 17 ರಷ್ಟು ಪ್ರಕರಣಗಳು 9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರ ಮೇಲಿನದ್ದಾಗಿದೆ. ಶೇ. 25ರಷ್ಟು ಪ್ರಕರಣಗಳಲ್ಲಿ 10ರಿಂದ 12 ವರ್ಷ ವಯಸ್ಸಿನ ಮಕ್ಕಳು ಸಂತ್ರಸ್ತರಾಗಿದ್ದಾರೆ. ಇನ್ನುಳಿದ ಪ್ರಕರಣಗಳಲ್ಲಿ 13-14 ವರ್ಷ ವಯಸ್ಸಿನ ಮಕ್ಕಳು ಸಂತ್ರಸ್ತರಾಗಿದ್ದಾರೆ.

ಸಾಮಾನ್ಯವಾಗಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾದರೆ, ಅವರು ಅವರ ತಂದೆ ತಾಯಿಯ ಬಳಿ ಅಥವಾ ಸ್ನೇಹಿತರ ಬಳಿ ವಿಷಯವನ್ನು ಹೇಳುತ್ತಾರೆ. ಆದರೆ ಬಾಲಕರು ಕಳಂಕ ಎದುರಿಸಲು ಹೆದರಿ, ವಿಚಾರವನ್ನು ಬಚ್ಚಿಡುತ್ತಾರೆ ಎನ್ನುತ್ತಾರೆ ವರದಿ ತಯಾರಿಸಿರುವ ನಿಶಾಂತಿಣಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net