

ರಾಜ್ಕೋಟ್: ಅಮ್ಮ ಮತ್ತು ತಂಗಿ ಸರಿಯಾದ ಸಮಯಕ್ಕೆ ಊಟ ಕೊಟ್ಟಿಲ್ಲವೆನ್ನುವ ಕಾರಣಕ್ಕೆ ಮಗ ಇಬ್ಬರನ್ನೂ ಕೊಲೆ ಮಾಡಿರುವ ಘಟನೆ ಗುಜರಾತ್ನ ರಾಜ್ಕೋಟ್ನಲ್ಲಿ ನಡೆದಿದೆ. ಇಬ್ಬರನ್ನೂ ಕೊಂದ ಮಗನೀಗ ಪೊಲೀಸರ ಅತಿಥಿಯಾಗಿದ್ದಾನೆ.
ರಾಜ್ಕೋಟ್ನ ಹಳ್ಳಿಯೊಂದರಲ್ಲಿ ಕೃಷಿಕನಾಗಿರುವ ದೇವಾಶಿ ಭಾಟಿಯಾ ಮನೆಯಲ್ಲಿ ಈ ಘಟನೆ ನಡೆದಿದೆ. ದೇವಾಶಿಯದು ಅಮ್ಮ ಕಸ್ತೂರಾ ಭಾಟಿಯಾ ಮತ್ತು ತಂಗಿ ಸಂಗೀತಾ ಭಾಟಿಯಾಳೊಂದಿಗೆ ಬದುಕುವ ಸಂಸಾರ. ಶನಿವಾರ ಬೆಳಗ್ಗೆಯೇ ಕಸ್ತೂರಾ ಮತ್ತು ಸಂಗೀತಾ ಜಗಳವಾಡಲು ಆರಂಭಿಸಿದ್ದಾರೆ. ಇವತ್ತು ನೀನು ಅಡುಗೆ ಮಾಡು ಎಂದು ಕಸ್ತೂರಾ ಹೇಳಿದರೆ, ಅದಕ್ಕೆ ವಿರೋಧಿಸಿದ ಸಂಗೀತಾ ಅಮ್ಮನೇ ಅಡುಗೆ ಮಾಡಲಿ ಎಂದು ಪಟ್ಟು ಹಿಡಿದಿದ್ದಾಳೆ. ಅಮ್ಮ ಮಗಳ ಜಗಳವನ್ನು ಬಗೆಹರಿಸಲು ಪ್ರಯತ್ನ ಪಟ್ಟ ದೇವಾಶಿ ಸುಸ್ತಾಗಿ, 'ಏನಾದರೂ ಮಾಡಿ, ಒಟ್ಟಿನಲ್ಲಿ ನಾನು ರಾತ್ರಿ ಬರುವುದರೊಳಗೆ ಅಡುಗೆ ಮಾಡಿಟ್ಟಿರಿ' ಎಂದು ಹೇಳಿ ಹೊರಟುಹೋಗಿದ್ದಾನೆ.
ಸಂಜೆ ಕೆಲಸ ಮುಗಿಸಿ, ಹಸಿವಿನಿಂದ ಮನೆಗೆ ಬಂದ ದೇವಾಶಿಗೆ ನಿರಾಸೆ ಉಂಟಾಗಿತ್ತು. ಅಮ್ಮ ಮಗಳ ಜಗಳ ತಾರಕಕ್ಕೇರಿ, ಇಬ್ಬರೂ ಅಡುಗೆ ಮಾಡದೆ ಕುಳಿತುಬಿಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ. ಅವರಿಬ್ಬರ ಉಸಿರು ನಿಲ್ಲುವವರೆಗೂ ಥಳಿಸಿದ್ದಾನೆ.
ಅಮ್ಮ ಮತ್ತು ತಂಗಿ ಸಾವನ್ನಪ್ಪಿರುವುದು ತಿಳಿದನಂತರ ಭಯಗೊಂಡ ದೇವಾಶಿ, ಅಕ್ಕ ಪಕ್ಕದ ಮನೆಯವರು ಮತ್ತು ಪೊಲೀಸರಿಗೆ ಕರೆ ಮಾಡಿ ನಡೆದ ವಿಚಾರ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಅಪರಾಧಿಯನ್ನು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)