ಪ್ರಿಯಕರನ ಮಾತು ನಂಬಿ ಮನೆಗೆ ಹೋದ ಗರ್ಭಿಣಿ ದುರಂತ ಸಾವು: ತನಿಖೆಯಲ್ಲಿ ಬಯಲಾಯ್ತು ಭೀಕರತೆ

UP Woman Death
Published on

ಲಖನೌ: ಉತ್ತರ ಪ್ರದೇಶದ ಮೀರತ್​ ಜಿಲ್ಲೆಯ ನಿರ್ಜನ ಪ್ರದೇಶವೊಂದರಲ್ಲಿ ಗರ್ಭಿಣಿ ಮಹಿಳೆಯ ಮೃತದೇಹ ಪತ್ತೆಯಾದ ಮೂರು ದಿನದ ಬಳಿಕ ಆಕೆಯ ಪ್ರಿಯಕರ ಸೇರಿದಂತೆ ಇತರೆ ನಾಲ್ವರು ಆರೋಪಿಗಳನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ ಕೊಲೆಯಾದ ಮಹಿಳೆಯನ್ನು ರಾಂಬಿರಿ ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ಆದೇಶ್​, ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಿದ ಬಳಿಕ ಆಕೆಯ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಂಡನೊಂದಿಗೆ ಡಿವೋರ್ಸ್​

ರಾಂಬಿರಿಯ ಕೊಲೆಯಾಗಿದೆ ಎಂದು ಆಕೆಯ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಅಡಿಯಲ್ಲಿ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಂಬಿರಿ 2015ರಲ್ಲಿ ವಿನೋದ್​ ಎಂಬಾತನ ಜತೆ ಮದುವೆ ಆಗಿದ್ದಳು. ಒಂದು ವರ್ಷ ಸಂಸಾರ ನಡೆಸಿದ್ದ ರಾಂಬಿರಿ, ಮನಸ್ತಾಪ ಹಿನ್ನೆಲೆಯಲ್ಲಿ ಗಂಡನಿಂದ ಬೇರೆಯಾಗಿದ್ದಳು. ಬಳಿಕ ತಂದೆಯ ಮನೆಯಲ್ಲೇ ಆಕೆ ಉಳಿದುಕೊಂಡಿದ್ದಳು. ಈ ಸಮಯದಲ್ಲಿ ಆದೇಶ್​​ ಎಂಬುವನ ಪರಿಚಯ ಆಗಿತ್ತು. ನಂತರ ಪರಿಚಯ ಪ್ರೇಮಕ್ಕೆ ತಿರುಗಿ, ದೈಹಿಕ ಸಂಬಂಧವೂ ಬೆಳೆದಿತ್ತು.

ಸ್ನೇಹಿತರೊಂದಿಗೆ ಸೇರಿ ಸಂಚು

ದಿನಗಳು ಉರುಳಿದಂತೆ ರಾಂಬಿರಿ ಗರ್ಭಿಣಿಯಾದಳು. ಬಳಿಕ ತನ್ನನ್ನು ಮದುವೆ ಆಗುವಂತೆ ಆದೇಶ್​ನನ್ನು ರಾಂಬಿರಿ ಒತ್ತಾಯಿಸುತ್ತಿದ್ದಳು. ಆದರೆ, ಆದೇಶ್​ಗೆ ಮದುವೆ ಆಗಲು ಇಷ್ಟ ಇರಲಿಲ್ಲ. ಆದರೆ, ರಾಂಬಿರಿ ಮಾತ್ರ ನಿರಂತರವಾಗಿ ಒತ್ತಾಯ ಮಾಡುತ್ತಿದ್ದಳು. ಇದರಿಂದ ಆಕ್ರೋಶಗೊಂಡ ಆದೇಶ್​​, ಆಕೆಯನ್ನು ಕೊಲ್ಲಲು ಸ್ನೇಹಿತರೊಂದಿಗೆ ಸೇರಿ ಸಂಚು ರೂಪಿಸಿದನು.

ಜುಲೈ 2ರಂದು ಆದೇಶ್​, ರಾಂಬಿರಿಗೆ ಕರೆ ಮಾಡಿ ತನ್ನ ಮನೆಯಲ್ಲಿ ಭೇಟಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದನು. ಆಕೆ ಮನೆಗೆ ಬರುತ್ತಿದ್ದಂತೆ ತನ್ನ ಸ್ನೇಹಿತರೊಂದಿಗೆ ಸೇರೆ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿ, ಆಕೆಯ ಮೃತದೇಹವನ್ನು ನಿರ್ಜನ ಪ್ರದೇಶವೊಂದರಲ್ಲಿ ಎಸೆದು ಪರಾರಿಯಾಗಿದ್ದರು. ಇದಾದ ಒಂದು ದಿನದ ಬಳಿಕ ಆಕೆಯ ಮೃತದೇಹ ಪತ್ತೆಯಾಗಿತ್ತು. ಇದೀಗ ಆರೋಪಿಗಳ ಬಂಧನವಾಗಿದೆ.

ಆದೇಶ್​ ಜೊತೆಗೆ ದೀಪಕ್​, ಆರ್ಯನ್​, ಸಂದೀಪ್​ ಮತ್ತು ರೋಹಿತ್​ ಎಂಬುವರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net